ನವದೆಹಲಿ: ಪ್ರತಿಬಾರಿಯ ಬಜೆಟ್ ನಲ್ಲಿ ಪೂರ್ವಭಾವಿಯಾಗಿ ಮಂಡಿಸಲಾಗುವ ಆರ್ಥಿಕ ಸಮೀಕ್ಷೆಯ ಅಂಶಗಳು ಕೇಂದ್ರ ಬಿಂದುವಾಗಿರುತ್ತವೆ. ಅಂತೆಯೇ 2017-18 ನೇ ಸಾಲಿನ ಬಜೆಟ್ ನ ಪೂರ್ವಭಾವಿ ಆರ್ಥಿಕ ಸಮೀಕ್ಷೆಯ ಅಂಶವೊಂದು ದೇಶಾದ್ಯಂತ ಅತಿ ಹೆಚ್ಚು ಚರ್ಚೆಯಾಗುತ್ತಿದ್ದು, ಕುತೂಹಲವನ್ನೂ ಉಂಟುಮಾಡಿದೆ.
2017-18 ನೇ ಸಾಲಿನ ಬಜೆಟ್ ಪೂರ್ವಭಾವಿ ಆರ್ಥಿಕ ಸಮೀಕ್ಷೆಯಲ್ಲಿ ಸಾಮಾನ್ಯ ಜನರೂ ಸೇರಿದಂತೆ ಎಲ್ಲರ ಗಮನ ಸೆಳೆದಿರುವುದು ಯೂನಿವರ್ಸಲ್ ಬೇಸಿಕ್ ಇನ್ ಕಮ್ (ಸಾರ್ವತ್ರಿಕ ಮೂಲಭೂತ ಆದಾಯ) ಎಂಬುದು ಭಾರತದ ಮಟ್ಟಿಗೆ ವಿನೂತನ ಅಂಶ ಅಥವ ಯೋಜನೆಯಾಗಿದೆ. ಯುಬಿಐ ಎಂದರೆ ಹೆಸರೇ ಹೇಳುವಂತೆ ದೇಶದ ಪ್ರತಿಯೊಬ್ಬ ಪ್ರಜೆಗೂ ಸಹ ನಿಯಮಿತವಾಗಿ ಕನಿಷ್ಠ ಆದಾಯ ಪಾವತಿ ಮಾಡುವುದು ಎನ್ನಬಹುದು.
ಕೆಲಸ ಮಾಡದೇ ಇದ್ದರೂ ಪ್ರತಿಯೊಬ್ಬ ಪ್ರಜೆಗೂ ಇದನ್ನು ಕೊಡಮಾಡಲಾಗುವುದರಿಂದ ಯೂನಿವರ್ಸಲ್ ಬೇಸಿಕ್ ಇನ್ ಕಮ್ (ಸಾರ್ವತ್ರಿಕ ಮೂಲಭೂತ ಆದಾಯ) ಎಂಬ ಹೆಸರು ಬಂದಿದ್ದು, ಇದನ್ನು ಎಲ್ಲಾ ಸಾಮಾಜಿಕ ಭದ್ರತೆ ಯೋಜನೆಗಳ ತಾಯಿಯೆಂದೇ ಬಣ್ಣಿಸಲಾಗುತ್ತಿದೆ.
ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಸಾರ್ವತ್ರಿಕ ಮೂಲಭೂತ ಆದಾಯದ ಬಗ್ಗೆ ಮಾತನಾಡಿದ್ದು, ಕೇಂದ್ರ ಸರ್ಕಾರ ಯಾವುದೇ ಷರತ್ತುಗಳಿಲ್ಲದೇ, ಪ್ರತಿಯೊಬ್ಬ ವ್ಯಕ್ತಿಗೂ ವಾರ್ಷಿಕವಾಗಿ 10,000-15,000 ರೂಗಳನ್ನು ನೀಡುವ ಯೋಜನೆಯನ್ನು ಕಳೆದ ವರ್ಷವೇ ಪರಿಗಣಿಸಿತ್ತು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಬಜೆಟ್ ನ ಮುನ್ನೋಟವಾಗಿರುವ ಈ ಬಾರಿಯ ಆರ್ಥಿಕ ಸಮೀಕ್ಷೆಯಲ್ಲಿ ಸಾರ್ವತ್ರಿಕ ಮೂಲಭೂತ ಆದಾಯದ ಬಗ್ಗೆ ಪ್ರಸ್ತಾಪ ಮಾಡಲಾಗಿರುವುದು ಅರುಣ್ ಜೇಟ್ಲಿ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಸಾರ್ವತ್ರಿಕ ಮೂಲಭೂತ ಆದಾಯ ಯೋಜನೆಯನ್ನು ಘೋಷಿಸುವ ಬಗ್ಗೆ ಅಪಾರ ನಿರೀಕ್ಷೆಗಳಿವೆ.
ಸಾರ್ವತ್ರಿಕ ಮೂಲಭೂತ ಆದಾಯ ಪಾವತಿ ಹೇಗೆ?: ಮೂಲಭೂತ ಆದಾಯವನ್ನು ನಗದು ರೂಪದಲ್ಲೇ ಪಾವತಿ ಮಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆಯಾದರೂ, ಉಚಿತ ಶಿಕ್ಷಣ, ಅಥವಾ ಮೂಲಭೂತ ಆರೋಗ್ಯ ವಿಮೆ ರೂಪದಲ್ಲಿಯೂ ನೀಡಬಹುದು ಎನ್ನಲಾಗುತ್ತಿದೆ.
ಭಾರತದಲ್ಲಿ ಜಾರಿ ಹೇಗೆ ಸಾಧ್ಯ?: ಸಾರ್ವತ್ರಿಕ ಮೂಲಭೂತ ಆದಾಯ ಯೋಜನೆ ಜಾರಿಗೆ ಬಂದಲ್ಲಿ, ಬಡತನ ನಿರ್ಮೂಲನೆ ಯೋಜನೆಗಳಾದ ಇಂದಿರಾ ಆವಾಸ್ ಯೋಜನೆ ನರೇಗಾ, ಪಿಡಿಎಸ್ ಯೋಜನೆಗಳಿಗೆ ಖೋಕ್ ನೀಡುವ ಸಾಧ್ಯತೆ ದಟ್ಟವಾಗಿದೆ.
ಎಷ್ಟು ಖರ್ಚಾಗುತ್ತದೆ?: 1.3 ಬಿಲಿಯನ್ ಭಾರತೀಯರಿಗೆ 1,000 ರೂಗಳಂತೆ ಸಾರ್ವತ್ರಿಕ ಮೂಲಭೂತ ಆದಾಯ ನೀಡುವುದೆಂದರೆ ಸರ್ಕಾರದ ಬೊಕ್ಕಸಕ್ಕೆ 15.6 ಲಕ್ಷ ಕೋಟಿ ರೂಪಾಯಿ ಹೆಚ್ಚಿನ ಹೊರೆ ಬೀಳಲಿದೆ, ಅಂದರೆ ಜಿಡಿಪಿಯ ಶೇ.10 ರಷ್ಟನ್ನು ಇದಕ್ಕಾಗಿ ವ್ಯಯಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಂಡಿದ್ದು, ತೆಂಡೂಲ್ಕರ್ ಸಮಿತಿ ಶಿಫಾರಸ್ಸಿನ ಆಧಾರದಲ್ಲಿ ಬಡತನ ರೇಖೆ ಅಥವಾ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸಾರ್ವತ್ರಿಕ ಮೂಲಭೂತ ಆದಾಯ ಯೋಜನೆ ಘೋಷಿಸುವ ಸಾಧ್ಯತೆ ಇದೆ.
ಭಾರತದಲ್ಲಿ ಇಂತಹ ಪ್ರಯೋಗ ನಡೆದಿತ್ತಾ?: 2011 ರಲ್ಲಿ ಮಧ್ಯಪ್ರದೇಶ ಸರ್ಕಾರ ಇಂಥದ್ದೊಂದು ಪ್ರಯತ್ನಕ್ಕೆ ಮುಂದಾಗಿತ್ತು. ಪ್ರಾರಂಭಿಕ ಹಂತದಲ್ಲಿ 8 ಹಳ್ಳಿಗಳಲ್ಲಿ ಜಾರಿಯಾಗಿದ್ದ ಯೋಜನೆಯಡಿ ಪ್ರತಿ ಕುಟುಂಬದ ತಂದೆ-ತಾಯಿ ವಯಸ್ಕರಿಗೆ ಮಾಸಿಕವಾಗಿ 200 ರೂಗಳು ಹಾಗೂ ಮಕ್ಕಳಿಗೆ 100 ರೂ ನೀಡುವ ಯೋಜನೆ ಜಾರಿಗೆ ತಂದಿತ್ತು. ನಂತರದ ದಿನಗಳಲ್ಲಿ 300, 150 ರೂಗಳಿಗೆ ಆದಾಯ ಪಾವತಿಯನ್ನು ಏರಿಕೆ ಮಾಡಲಾಗಿತ್ತು.
ಬೇರೆ ದೇಶದಲ್ಲಿಯೂ ಸಾರ್ವತ್ರಿಕ ಮೂಲಭೂತ ಆದಾಯ ಯೋಜನೆ ಮಸೂದೆ: ವಿಶ್ವದಲ್ಲೇ ಮೊದಲ ಬಾರಿಗೆ ಸ್ವಿಟ್ಜರ್ಲೆಂಡ್ ಇಂತಹ ಯೋಜನೆ ಜಾರಿಗೆ ಮುಂದಡಿ ಇಟ್ಟಿತ್ತು ಅದೂ 2016ರ ಜೂನ್ ನಲ್ಲಿ. ದೇಶದ ಉದ್ಯೋಗಸ್ಥರಾಗಿರಲಿ, ನಿರುದ್ಯೋಗಿಗಳಾಗಿರಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಕಡ್ಡಾಯ ಮಾಸಿಕ ವೇತನ ನೀಡುವ ಮಹತ್ವದ ಪ್ರಸ್ತಾವನೆಯೊಂದನ್ನು ಸ್ವಿಟ್ಜರ್ಲೆಂಡ್ ಮಂಡಿಸಿತ್ತು. 21ನೇ ಶತಮಾನದಲ್ಲಿ ಹೆಚ್ಚಿನ ಕೆಲಸಗಳು ರೋಬಾಟ್‍ಗಳಿ೦ದಲೇ ನಡೆಯುತ್ತಿರುವುದರಿ೦ದ ಹೆಚ್ಚು ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಮೂಲ ವೇತನದ ಅಗತ್ಯವಿದೆ ಎ೦ಬುದು ಈ ಪ್ರಸ್ತಾವನೆ ಬೆ೦ಬಲಿಸುವವರ ವಾದವಾಗಿತ್ತು. ಈಗ ಭಾರತವೂ ಇದೇ ಮಾದರಿಯಲ್ಲಿ ಸಾರ್ವತ್ರಿಕ ಮೂಲಭೂತ ಆದಾಯ ಯೋಜನೆ ಜಾರಿಗೊಳಿಸಲಿದೆಯೇ, ಜಾರಿಗೊಳಿಸಿದರೆ ಅದರ ಸ್ವರೂಪ ಹೇಗಿರಲಿದೆ ಎಂಬ ಬಗ್ಗೆ ಕುತೂಹಲ ಮೂಡಿದೆ.