ನವದೆಹಲಿ: 2018ನೇ ಸಾಲಿನ ಕೇಂದ್ರ ಬಜೆಟ್ ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ಪ್ರಮುಖವಾಗಿ ದೇಶದಲ್ಲಿ ಕೇಂದ್ರ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತಿಲ್ಲ ಎಂಬ ಆರೋಪಗಳೂ ಕೂಡ ಕೇಳಿಬಂದಿದೆ.
ಹೀಗಾಗಿ ಇಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಡಿಸುತ್ತಿರುವ ಕೇಂದ್ರ ಬಜೆಟ್ ಉದ್ಯೋಗ ಸೃಷ್ಟಿಗೆ ಪೂರಕವಾಗಿರಲಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಪ್ರಮುಖವಾಗಿ ಉದ್ಯೋಗ ಸೃಷ್ಟಿಗೆ ಗರಿಷ್ಠ ಸಾಧ್ಯತೆ ಇರುವ ವಲಯಗಳಲ್ಲಿ ಹೂಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ವಿತ್ತ ಸಚಿವ ಜೇಟ್ಲಿ ಚಿಂತಿಸಬೇಕಿದೆ.
ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ದೇಶದ ಎರಡನೇ ಅತ್ಯಂತ ದೊಡ್ಡ ಉದ್ಯೋಗ ಸೃಷ್ಟಿಯ ವಲಯವಾಗಿದ್ದು, 2016ರ ನೋಟು ರದ್ದತಿಯ ನಂತರ ಈ ಕ್ಷೇತ್ರ ಹೆಚ್ಚು ಸಂಕಷ್ಟದಲ್ಲಿದೆ. ಪ್ರತಿ ವರ್ಷ ಒಂದು ಕೋಟಿ ಉದ್ಯೋಗ ಸೃಷ್ಟಿಯಾಗಿದೆ ಎಂದು ಸರ್ಕಾರ ಹೇಳುತ್ತಿದೆಯಾದರೂ, 2014ರ ಬಳಿಕ ದೇಶದಲ್ಲಿ ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ ಸುಮಾರು 8.5 ಲಕ್ಷ ಎಂದು ಅಂಕಿ ಅಂಶಗಳು ಹೇಳುತ್ತಿವೆ.
ಇದಲ್ಲದೆ ಕೃಷಿ ಕ್ಷೇತ್ರ ದೇಶದಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿದೆ. 2022ರ ಹೊತ್ತಿಗೆ ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸುವುದು ಕೇಂದ್ರ ಸರ್ಕಾರದ ಕನಸಾಗಿದ್ದು. ಈ ವರ್ಷ (2016–17) ಕೃಷಿ ಕ್ಷೇತ್ರದ ಪ್ರಗತಿ ಶೇ 2.1ಕ್ಕೆ ಇಳಿದಿದೆ. ಕಳೆದ ವರ್ಷ ಇದು ಶೇ 4ರಷ್ಟಿತ್ತು. ಬೇಸಾಯಕ್ಕೆ ಉತ್ತೇಜನ ನೀಡಲು ಜೇಟ್ಲಿ ಅವರು ಸಾಕಷ್ಟು ಹಣ ನೀಡಬೇಕಾಗುತ್ತದೆ. ನೀರಾವರಿ ಮತ್ತು ಬೆಳೆ ವಿಮೆಗೆ ಆದ್ಯತೆ ದೊರೆಯ ಬಹುದು ಎಂಬ ನಿರೀಕ್ಷೆ ಇದೆ. ಧಾನ್ಯ ಸಂಗ್ರಹಕ್ಕೆ ಗೋದಾಮು ನಿರ್ಮಿಸುವವರಿಗೆ ಸಹಾಯಧನ ನೀಡುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.