ಸಮೃದ್ಧ ಡಿವಿಡೆಂಡ್ ಹೂಡಿಕೆ ಕಡಿಮೆ
ಷೇರುಪೇಟೆಯಲ್ಲಿ ಹಣ ಹೂಡುವ ಜನರಲ್ಲಿ ಮೂಡುವ ಆಸೆಗಳು ಎರಡು ವಿಧ. ಮೊದಲನೆಯದು ಪ್ರತಿವರ್ಷ ಹೆಚ್ಚುತ್ತಲೇ ಹೋಗುವ ಡಿವಿಡೆಂಡ್. (ಬ್ಯಾಂಕ್ಗಳ ಠೇವಣಿಗಿಂತ ಹೆಚ್ಚು ಪ್ರತಿಫಲದ ನಿರೀಕ್ಷೆ). ಎರಡನೆಯದು ಕಾಲಕಾಲಕ್ಕೆ ಷೇರುಗಳ ಪೇಟೆ ಮೌಲ್ಯ ಹೆಚ್ಚುತ್ತಲೇ ಹೋಗುವುದು. ಅಂದರೆ ಬಂಡವಾಳ ವೃದ್ಧಿ. ಷೇರು ಕೊಂಡ ನಂತರ ಹೆಚ್ಚು ಬಂಡವಾಳದ ಹೂಡಿಕೆಗೆ ಕಡ್ಡಾಯವಿಲ್ಲ. ಒಳ್ಳೆಯ ಕಂಪನಿ ಆರಿಸಿಕೊಂಡರೆ ದಶಕದ ಅವಧಿಯಲ್ಲಿ ಬಂಡವಾಳ ನೂರು ಪಟ್ಟು- ಸಾವಿರ ಪಟ್ಟು ಹೆಚ್ಚಿದರೂ ಆಶ್ಚರ್ಯವಿಲ್ಲ.
ಆದರೆ ನೆನಪಿನಲ್ಲಿರಲಿ. ಎಲ್ಲ ಕಂಪನಿಗಳೂ ನಿರಂತರವಾಗಿ ಡಿವಿಡೆಂಡ್ ಕೊಡುತ್ತವೆ ಅಥವಾ ಎಲ್ಲ ಕಂಪನಿಗಳ ಷೇರು ಬೆಲೆಯೂ ಮೇಲೇರುತ್ತಲೇ ಹೋಗುತ್ತದೆ ಎಂದೇನೂ ಅಲ್ಲ. ಈ ಪಾಠ ನಿರಂತರ ನೆನಪಿನಲ್ಲಿರಬೇಕು. 2014ರಲ್ಲಿ ಬಹುತೇಕ ಕಂಪನಿಗಳು ಭಾರಿ ಡಿವಿಡೆಂಡ್ ನೀಡಿವೆ. ಒಟ್ಟಾರೆ ಲೆಕ್ಕದಲ್ಲಿ ವಾರ್ಷಿಕ ಲಾಭದ ಶೇ.30 ಡಿವಿಡೆಂಡ್ ರೂಪದಲ್ಲಿ ಪಾವತಿಯಾಗಿದೆ. ಡಿವಿಡೆಂಡ್ಗೆ ಆದಾಯ ತೆರಿಗೆ ಇಲ್ಲ.
ಕಂಪನಿಗಳಿಗೆ ಇಷ್ಟೊಂದು ಧಾರಾಳತನ ಎಲ್ಲಿಂದ ಬಂತು? ಇದರಲ್ಲೇನೂ ರಹಸ್ಯವಿಲ್ಲ. ಗಳಿಸಿದ ಲಾಭವನ್ನು ಬಂಡವಾಳವಾಗಿ ಹೂಡುವುದಕ್ಕೆ ಕಳೆದ ಮೂರು ವರ್ಷದಲ್ಲಿ ಅವಕಾಶ ಇರಲಿಲ್ಲ. ಷೇರುದಾರರಿಗೆ ಡಿವಿಡೆಂಡ್ ಕೊಟ್ಟರೆ ಪ್ರಾಯೋಜಕರಿಗೂ ತಾನೇ ತಾನಾಗಿ ಡಿವಿಡೆಂಡ್ ಸಂದಾಯವಾಗುತ್ತದೆ.
ಒಂದು ಅಂದಾಜಿನಂತೆ 1000 ಕಂಪನಿಗಳು 2014ರಲ್ಲಿ 1.32 ಲಕ್ಷ ಕೋಟಿ ರು. ಡಿವಿಡೆಂಡ್ ನೀಡಿವೆ. ಈ ಹಣ ಬಂಡವಾಳಕ್ಕೆ ಪರಿವರ್ತನೆಯಾಗಿದ್ದರೆ, ಪ್ರಗತಿಯ ವೇಗ ಹೆಚ್ಚುತ್ತಿತ್ತು. ಆದರೆ ಅಂಥ ಯೋಜನೆಗಳೇ ಇರಲಿಲ್ಲ. ಉದಾಹರಣೆಗೆ ಟಾಟಾ ಕಂಪನಿ ನೀಡಿದ ಡಿವಿಡೆಂಡ್- 568 ಕೋಟಿ ರು.ಸರ್ಕಾರಿ ಕಂಪನಿಗಳೂ ಭರ್ಜರಿ ಡಿವಿಡೆಂಡ್ ನೀಡಿವೆ. ಈ ಹಣದಿಂದ ಬಜೆಟ್ ಕೊರತೆ ತುಂಬಿಕೊಳ್ಳುವುದು ಸರ್ಕಾರದ ಉದ್ದೇಶ. ಈ ವರ್ಷ ಸರ್ಕಾರಿ ಕಂಪನಿಗಳಿಗೆ ಸಾಧ್ಯವಿರುವಷ್ಟೂ ಹೆಚ್ಚು ಡಿವಿಡೆಂಡ್ ನೀಡಬೇಕೆನ್ನುವ ಆದೇಶವಿತ್ತು.
ಆರ್ಬಿಐನ 'ಸಕಾಲ' ಯೋಜನೆ
ರಿಸರ್ವ್ ಬ್ಯಾಂಕಿನ ಕೆಲಸದ ವಿಧಾನಕ್ಕೆ ಸರ್ಕಾರಕ್ಕೂ ಆದೇಶ ನೀಡುವ ಅಧಿಕಾರವಿಲ್ಲ. ಆದರೂ ರಿಸರ್ವ್ ಬ್ಯಾಂಕ್ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಸರ್ಕಾರದ ನೀತಿಯನ್ನು ಗಮನಿಸುವುದು ನಿಜ. ಸರ್ಕಾರಕ್ಕೂ ರಿಸರ್ವ್ ಬ್ಯಾಂಕಿನ ಕೆಲಸದ ಪರಿಚಯವಿದೆ.
ಈಗ ರಿಸರ್ವ್ ಬ್ಯಾಂಕ್ ತಾನೇ ರೂಪಿಸಿಕೊಂಡಿರುವ ನಿಯಮದಂತೆ 155 ವಿಷಯಗಳಲ್ಲಿ ಅವಧಿ ಬದ್ಧವಾಗಿ ನಿರ್ಧಾರ ಪ್ರಕಟಿಸಬೇಕಾಗಿದೆ. ಈ ನಿಯಮವನ್ನು ಬ್ಯಾಂಕಿನ ಮೇಲೆ ಯಾರೂ ಹೇರಿಲ್ಲ. ಖಾಸಗಿ ಬ್ಯಾಂಕ್ಗಳ ವ್ಯವಹಾರದ ಅನುಮತಿ ಕುರಿತು ಸಾಮಾನ್ಯವಾದ ಲೆಕ್ಕದ ವಿಚಾರದವರೆಗೂ 155 ವಿಷಯಗಳಲ್ಲಿ ಅನೇಕ ಪ್ರಮುಖ ವಿಚಾರಗಳನ್ನು ಅಳವಡಿಸಲಾಗಿದೆ. ಈಚೆಗೆ ಪ್ರಧಾನಿ ಮೋದಿ ಹಿರಿಯ ಅಧಿಕಾರಿಗಳಿಗೆ ಕಡತ ವಿಲೇವಾರಿಯಲ್ಲಿ ಅವಧಿ ಬದ್ಧ ಕಾರ್ಯಕ್ರಮ ರೂಪಿಸಿಕೊಳ್ಳಿ ಎಂದು ಹೇಳಿದ ನಂತರ ರಿಸರ್ವ್ ಬ್ಯಾಂಕಿನ ಪ್ರಕಟಣೆಯೂ ಹೊರಬಿದ್ದಿದೆ. ಆದರೆ ಬ್ಯಾಂಕ್ ಸ್ಪಷ್ಟಪಡಿಸಿರುವ ಒಂದು ವಿಚಾರ ಗಮನಾರ್ಹ: ಅವಧಿ ಒಂದು ಸೂಚನೆ ಮಾತ್ರ. ಅದರ ಪಾಲನೆಗೆ ಕಾಯಿದೆ ಕ್ರಮಕ್ಕೆ ಅವಕಾಶವಿಲ್ಲ.
-ಸತ್ಯ