ಮುಂಬೈ: ಕಪ್ಪುಹಣದ ಕುರಿತಂತೆ ಸುಪ್ರೀಂಕೋರ್ಟ್‌ನಲ್ಲಿ ಸತತ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ಷೇರುಮಾರುಕಟ್ಟೆಯಲ್ಲಿ ದಾಖಲೆ ಪ್ರಮಾಣದ ಏರಿಕೆಯಾಗಿದೆ.
ಕಳೆದ ಮೂರು ದಿನಗಳಿಂದ ಸತತ ಏರಿಕೆ ದಾಖಲಿಸುತ್ತಿರುವ ಸೆನ್ಸೆಕ್ಸ್ ಇಂದು ಮತ್ತೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂದು ಸೆನ್ಸೆಕ್ಸ್ 250 ಪಾಯಿಂಟ್‌ಗಳ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆ 27, 358.85ಕ್ಕೆ ಸ್ಥಿರವಾಗಿದೆ. ನಿಫ್ಟಿಯಲ್ಲಿಯೂ ಕೂಡ ಏರಿಕೆ ಕಂಡು ಬಂದಿದ್ದು, 75 ಅಂಶಗಳ ಏರಿಕೆಯೊಂದಿಗೆ 8, 180.20 ಸ್ಥಿರಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶಿತ ಯೋಜನೆಯಾದ ಮೇಕ್ ಇನ್ ಇಂಡಿಯಾಗೆ ವಿದೇಶಿ ಬಂಡವಾಳದಾರರು ಆಕರ್ಷಿತರಾಗಿದ್ದು, ಎಫ್‌ಡಿಐ ಕುರಿತು ಕೇಂದ್ರ ಸರ್ಕಾರ ಕೈಗೊಂಡಿರುವ ಕೆಲ ಸುಧಾರಿತ ನಿರ್ಧಾರಗಳು ಮತ್ತು ಕೆಲ ನಿರ್ಬಂಧಗಳನ್ನು ಸಡಿಲಿಸಿದ್ದು, ಭಾರತೀಯ ಷೇರುಮಾರುಕಟ್ಟೆ ದಾಖಲೆ ಪ್ರಮಾಣದಲ್ಲಿ ಚೇತರಿಕೆಯಾಗುವಂತೆ ಮಾಡಿದೆ. ಕೇಂದ್ರ ಸರ್ಕಾರದ ನೂತನ ನಿಯಮಾವಳಿಗಳು ಭಾರತದಲ್ಲಿ ವಿದೇಶಿ ಬಂಡವಾಳ ಹೂಡಲು ಸಹಕಾರಿಯಾಗಿದ್ದು, ರಿಯಲ್ ಎಸ್ಟೇಟ್ ಮತ್ತು ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ಇದರ ಹೆಚ್ಚು ಲಾಭ ಗಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದೇ ಸೆಪ್ಟೆಂಬರ್ 8ರಂದು ಕೂಡ ಏರಿಕೆ ಕಂಡಿದ್ದ ಬಿಎಸ್‌ಇ ಸೆನ್ಸೆಕ್ಸ್ 0.96 ಅಂಶಗಳ ಏರಿಕೆಯೊಂದಿಗೆ 27.354.99ಕ್ಕೆ ಏರಿಕೆಯಾಗಿತ್ತು.