ಚೆನ್ನೈ: ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ನೋಕಿಯಾ ಇತಿಹಾಸದ ಪುಟ ಸೇರಿದ್ದು, ಚೆನ್ನೈನ ತಯಾರಿಕಾ ಘಟಕಕ್ಕೆ ಬೀಗ ಜಡಿಯಲಾಗಿದೆ.
ವಿಶ್ವದ ಮೊಬೈಲ್ ಸೇವಾರಂಗದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ತನ್ನ ಚಕ್ರಾಧಿಪತ್ಯ ಸಾಧಿಸಿದ್ದ ನೋಕಿಯಾ ಭಾರತದಲ್ಲಿ ಇತಿಹಾಸ ಪುಟ ಸೇರುತ್ತಿದ್ದು, ಇದರ ಮೊದಲ ಭಾಗವಾಗಿ ಚೆನ್ನೈನಲ್ಲಿ ನೋಕಿಯಾ ತಯಾರಿಕಾ ಘಟಕಕ್ಕೆ ಬೀಗ ಹಾಕಲಾಗಿದೆ. ಸ್ಮಾರ್ಟ್‌ಫೋನ್ ಮತ್ತು ಐಫೋನ್‌ಗಳ ಅಬ್ಬರದಿಂದಾಗಿ ಮಾರುಕಟ್ಟೆ ಮೇಲಿನ ತನ್ನ ಬಿಗಿ ಹಿಡಿತವನ್ನು ಕಳೆದುಕೊಂಡಿರುವ ನೋಕಿಯಾ ಇದೀಗ ತನ್ನ ಚೆನ್ನೈ ಘಟಕಕ್ಕೆ ಬೀಗಹಾಕಲು ನಿರ್ಧರಿಸಿದೆ.
ಕಳೆದ ಅಕ್ಟೋಬರ್ 7ರಂದೇ ಚೆನ್ನೈ ಘಟಕದಲ್ಲಿ ಇನ್ನು ಮುಂದೆ ಉತ್ಪನ್ನ ತಯಾರಿಕೆಯನ್ನು ಬಂದ್ ಮಾಡುವುದಾಗಿ ಘೋಷಣೆ ಮಾಡಿದ್ದ ಮೈಕ್ರೋಸಾಫ್ಟ್ ಸಂಸ್ಥೆ, ಇಂದಿನಿಂದ ಅಂದರೆ ನವೆಂಬರ್ 1 ರಂದು ಘಟಕಕ್ಕೆ ಶಾಶ್ವತ ಬೀಗ ಮುದ್ರೆ ಹಾಕಿದೆ. ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದ ನೋಕಿಯಾ ಸಂಸ್ಥೆ ಅಂತಿಮವಾಗಿ ತನ್ನ ಚೆನ್ನೈ ಘಟಕವನ್ನು ಮುಚ್ಚಲು ನಿರ್ಧರಿಸಿದ್ದು, ತನ್ನ ಎಲ್ಲ ಸಿಬ್ಬಂದಿಗಳಿಗೆ ಸ್ವಯಂ ನಿವೃತ್ತಿ ಮೇಲೆ ಕಳುಹಿಸಿದೆ.
ಇದಕ್ಕೂ ಮೊದಲು ಸ್ವಯಂ ನಿವೃತ್ತಿ ಪಡೆಯಲು ಹಿಂದೇಟು ಹಾಕಿದ್ದ ನೌಕರರು ಮೈಕ್ರೋಸಾಫ್ಟ್ ನೀಡಿದ ಆರ್ಥಿಕ ಪ್ಯಾಕೇಜನ್ನು ಪಡೆದುಕೊಂಡು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಫಿನ್‌ಲ್ಯಾಂಡ್ ಮೂಲದ ನೋಕಿಯಾ ಸಂಸ್ಥೆಯನ್ನು ಕಳೆದ ಏಪ್ರಿಲ್ 25ರಂದು ಸುಮಾರು 7.2 ಬಿಲಿಯನ್ ಹಣ ನೀಡಿ ಖರೀದಿ ಮಾಡಿದ್ದ ಮೈಕ್ರೋಸಾಫ್ಟ್ ಸಂಸ್ಥೆ, ಬಳಿಕ ನೋಕಿಯಾದಲ್ಲಿ ಸಾಕಷ್ಟು ಬದಲಾವಣೆ ಮಾಡಿತ್ತು.