ಮುಂಬೈ: 2020ರ ವೇಳೆಗೆ ವಿಶೇಷ ಆರ್ಥಿಕ ಮಾರ್ಗಸೂಚಿಯನ್ನು ರಚನೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಗಿ 80 ವರ್ಷಗಳು ಕಳೆದ ಹಿನ್ನಲೆಯಲ್ಲಿ ವಾಣಿಜ್ಯನಗರಿ ಮುಂಬೈನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ರಘುರಾಮ್ ರಾಜನ್ ನೇತೃತ್ವ ಆರ್ ಬಿಐ ಅನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ದೇಶದ ಅಭಿವೃದ್ಧಿಯಲ್ಲಿ ಆರ್ ಬಿಐ ನಿರ್ಣಾಯಕ ಪಾತ್ರ ನಿರ್ವಹಿಸುತ್ತಿದ್ದು, ಸರ್ಕಾರ ಮತ್ತು ಆರ್ ಬಿಐನ ಚಿಂತನೆಗಳು ಒಂದಾಗಿದ್ದರೆ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಶ್ರೀಮಂತರ ಪಾಲಿಗೆ ಮಾತ್ರ ಮೀಸಲಾಗಿದ್ದ ಬ್ಯಾಂಕಿಂಕ್ ವ್ಯವಸ್ಥೆಯನ್ನು ಆರ್ ಬಿಐ ತನ್ನ ವಿಶಿಷ್ಟ ನೀತಿ ನಿರ್ಣಯಗಳಿಂದ ಬಡವರವರೆಗೂ ಎಳೆದು ತಂದಿದೆ. ಬಡವರಿಗೂ ಸಂಪೂರ್ಣ ಬ್ಯಾಂಕಿಂಗ್ ದೊರೆಯಬೇಕು ಎನ್ನುವ ನೂರುಕೋಟಿ ಭಾರತೀಯರ ಕನಸನ್ನು ನನಸಾಗಿದ್ದು, ಈ ವಿಚಾರದಲ್ಲಿ ಆರ್ ಬಿಐ ಯಶಸ್ವಿಯಾಗಿದೆ. ನಾನು ಸರ್ಕಾರದ ಪ್ರತಿನಿಧಿಯಾಗಿ ಆರ್ ಬಿಐ ಅನ್ನು ಬಹಳಸಂತೋಷದಿಂದ ಶ್ಲಾಘಿಸುತ್ತೇನೆ. ಕಳೆದ 80 ವರ್ಷಗಳ ಸುದೀರ್ಘ ಯಾತ್ರೆಯಲ್ಲಿ ಶ್ರೀಮಾನ್ ದೇಶ್ ಮುಖ್ ರಿಂದ ಹಿಂಡಿದು ಈಗಿನ ರಘುರಾಮ್ ರಾಜನ್ ಅವರ ಅಧಿಕಾರಾವಧಿಯಲ್ಲಿ ಸಾಕಷ್ಟು ಮಂದಿ ಶ್ರಮಿಸಿದ್ದಾರೆ. ಶ್ರಮದಾನ ಮಾಡುವ ಮೂಲಕ ಆರ್ ಬಿಐ ಮತ್ತು ದೇಶದ ಆರ್ಥಿಕ ಸುಧಾರಣೆಗೆ ಶ್ರಮಿಸಿದ್ದಾರೆ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ.
ಆರ್ಥಿಕ ಕ್ಷೇತ್ರದಲ್ಲಿ ಹಲವು ರೀತಿಯ ಏಳುಬೀಳುಗಳನ್ನು ಅನುಭವಿಸಿದ್ದೇವೆ. ಪ್ರಮುಖವಾಗಿ ಜಾಗತಿಕ ದೃಷ್ಟಿಕೋನಕ್ಕೂ ಆರ್ ಬಿಐ ತನ್ನನ್ನು ತಾನು ಒಡ್ಡಿಕೊಂಡು ಆಗ್ಗಿಂದ್ದಾಗ್ಗೆ ಎದುರಾಗುವ ಜಾಗತಿಕ ಸ್ಪರ್ಧೆಗೆ ಸಿದ್ದವಾಗುತ್ತಲಿರುತ್ತದೆ. ಶ್ರೀಮಂತ ವ್ಯಕ್ತಿ ತನ್ನ ಪತ್ನಿ ಅಥವಾ ವೈದ್ಯರಿಗೆ ಸಮಯ ನೀಡುತ್ತಾನೆಯೋ ಇಲ್ಲವೋ ಆದರೆ ಬ್ಯಾಂಕಿಂಗ್ ಗಾಗಿಯೇ ಒಂದಿಷ್ಟು ಸಮಯವನ್ನು ಮೀಸಲಿಟ್ಟಿರುತ್ತಾನೆ. ಬ್ಯಾಕಿಂಗ್ ಎನ್ನುವುದು ಅಷ್ಟ್ರರಮಟ್ಟಿಗೆ ನಮ್ಮ ಜೀವನದಲ್ಲಿ ಬೆರೆತುಹೋಗಿದೆ.
ಎಷ್ಟೇ ದೊಡ್ಡ ಶ್ರೀಮಂತ ವ್ಯಕ್ತಿಯಾದರೂ ಆತ ಬೇಡುವ ಒಂದೇ ಒಂದು ಸ್ಥಳ ಎಂದರೆ ಬ್ಯಾಂಕ್. ಹೀಗಾಗಿ ನಾನು ಕೂಡ ಇಲ್ಲಿಗೆ ಒಂದು ವಿಚಾರವನ್ನು ಕೇಳಲು ಬಂದಿದ್ದೇನೆ. ನನ್ನ ಪರಿವಾರಕ್ಕಾಗಿ ನಾನು ಇದನ್ನು ಕೇಳುತ್ತಿದ್ದು, ನನ್ನ ದೇಶದ ಬಡಕುಂಟಬದ ನನ್ನ ಸಹೋದರ-ಸಹೋದರಿಯರಿಗಾಗಿ ನಾನು ಇದನ್ನು ಕೇಳುತ್ತಿದ್ದೇನೆ. ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಶ್ರೀಮಂತರ ಮನೆಬಾಗಿಲ ಬಳಿ ಹೇಗೆ ಕೆಲಸ ಮಾಡುತ್ತಿದೆಯೋ ಅದೇ ರೀತಿಯಲ್ಲಿ ಬಡವರಿಗೂ ಸೇವೆಯನ್ನು ನೀಡಬೇಕು. ಇದಕ್ಕಾಗಿ ಆರ್ ಬಿಐ ತನ್ನದೇ ಆದ ಮಾರ್ಗಸೂಚಿಯನ್ನು ರೂಪಿಸಿಕೊಂಡು ತನ್ನ 100ನೇ ವರ್ಷದ ವಾರ್ಷಿಕೋತ್ಸವದ ವೇಳೆ ಆ ಗುರಿಯನ್ನು ಮುಟ್ಟಲು ಕಾರ್ಯಪ್ರವೃತ್ತರಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಆರ್ ಬಿಐ ಮುಖ್ಯಸ್ಥ ರಘುರಾಮ್ ರಾಜನ್ ಮತ್ತು ಕೇಂದ್ರ ವಿತ್ತಸಚಿಲವ ಅರುಣ್ ಜೇಟ್ಲಿ ಅವರು ಪಾಲ್ಗೊಂಡಿದ್ದರು.