ವಾಣಿಜ್ಯ

ವಿದೇಶಿ ಬ್ಯಾಂಕು ಖಾತೆ ವಿವರ ಕುರಿತ ಸಂದೇಹಗಳಿಗೆ ತೆರಿಗೆ ಇಲಾಖೆಯಿಂದ ಶೀಘ್ರದಲ್ಲೆ ಸ್ಪಷ್ಟನೆ

Sumana Upadhyaya

ನವದೆಹಲಿ: ಅನೇಕ ವರ್ಷಗಳಿಂದ ವಿದೇಶಿ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದು, ಅವುಗಳಿಗೆ ಸಂಬಂಧಪಟ್ಟ ದಾಖಲೆಗಳು ಸಿಗದಿರುವಾಗ ಕಪ್ಪು ಹಣ ಕಾನೂನಿನಡಿಯಲ್ಲಿ ವಿವರಗಳನ್ನು ಸರ್ಕಾರಕ್ಕೆ ಒದಗಿಸಲು ಏನು ಮಾಡಬೇಕು ಎಂಬ ಗ್ರಾಹಕರ ಸಂದೇಹಗಳಿಗೆ ಉತ್ತರ ನೀಡುವ ಪ್ರಶ್ನೋತ್ತರಗಳ ಎರಡನೇ ಮಾಲಿಕೆಯನ್ನು ಹಣಕಾಸು ಸಚಿವಾಲಯ ಸದ್ಯದಲ್ಲೆ ಬಿಡುಗಡೆ ಮಾಡಲಿದೆ.

ಕಪ್ಪು ಪಣ ಕಾಯ್ದೆಯಡಿ ಜುಲೈ 1ರಂದು ಹೊರಡಿಸಿರುವ ಅಧಿಸೂಚನೆ ಪ್ರಕಾರ, ಪ್ರಶ್ನೋತ್ತರಗಳಲ್ಲಿ ಕೇಂದ್ರ ನೇರ ತೆರಿಗೆ ಮಂಡಳಿ ಅನೇಕ ಆರ್ಥಿಕ ತಜ್ಞರು ಒದಗಿಸಿದ ಮಾಹಿತಿಗಳನ್ನಾಧರಿಸಿ ಸುಮಾರು 22 ಪ್ರಶ್ನೆಗಳಿಗೆ ಪ್ರಶ್ನೋತ್ತರಗಳನ್ನು ತಯಾರಿಸಿ ಬಿಡುಗಡೆ ಮಾಡಲಿದೆ.

ವಿದೇಶಿ ಬ್ಯಾಂಕು ಖಾತೆಗಳ ವಿವರಗಳನ್ನು ಬಹಿರಂಗಪಡಿಸುವುದಕ್ಕೆ ಸಾರ್ವಜನಿಕರಿಂದ ತೆರಿಗೆ ಇಲಾಖೆ ಅನೇಕ ಪ್ರಶ್ನೆಗಳನ್ನು ಸ್ವೀಕರಿಸಿದೆ. ವಿದೇಶಿ ಬ್ಯಾಂಕುಗಳಲ್ಲಿ ಖಾತೆ ತೆರೆದ ನಂತರ ಕಾಲಕಾಲಕ್ಕೆ ವಿವರಗಳನ್ನು ಪಡೆಯಲಾಗಿಲ್ಲ. ಆದುದರಿಂದ ತಮ್ಮ ಬಳಿ ಯಾವುದೇ ಮಾಹಿತಿಗಳಿಲ್ಲ ಎಂದು ತೆರಿಗೆ ಇಲಾಖೆಗೆ ಅನೇಕರು ದೂರು ಸಲ್ಲಿಸಿದ್ದರು.

ಅನೇಕ ಸಂದರ್ಭಗಳಲ್ಲಿ ಖಾತೆದಾರರು ತಮ್ಮ ಖಾತೆಯ ಸಂಪೂರ್ಣ ವಿವರಗಳನ್ನು ಇಟ್ಟುಕೊಂಡಿರುವುದಿಲ್ಲ. ಹಲವು ವರ್ಷಗಳಿಂದ ಹಾಗೆಯೇ ಬಿಟ್ಟಿರುತ್ತಾರೆ. ಭಾರತದಲ್ಲಿದ್ದುಕೊಂಡು ದೀರ್ಘ ವರ್ಷಗಳ ಬ್ಯಾಂಕು ವಿವರಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬ ಬಗ್ಗೆ ತೆರಿಗೆ ಇಲಾಖೆಯ ಪ್ರಶ್ನೋತ್ತರದಲ್ಲಿ ತಿಳಿಸಲಾಗಿದೆ.

ಕಳೆದ ತಿಂಗಳು ತೆರಿಗೆ ಇಲಾಖೆ ಹೊರಡಿಸಿರುವ ಕಾನೂನಿನಂತೆ, ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿರುವ ಹಣದ ವಿವರಗಳನ್ನು ಬಹಿರಂಗಪಡಿಸುವಂತೆ ಸೂಚನೆ ನೀಡಿತ್ತು. ಕಪ್ಪು ಹಣ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿಗಳ) ಮತ್ತು ತೆರಿಗೆ ಕಾಯಿದೆ, 2015 ಸೆಪ್ಟೆಂಬರ್ 30ರಂದು ಕೊನೆಗೊಳ್ಳುತ್ತಿದ್ದು, ಈ ವರ್ಷದ ಅಂತ್ಯದೊಳಗೆ  ಶೇಕಡಾ 60ರಷ್ಟು ತೆರಿಗೆ ಮತ್ತು ದಂಡ ಕಟ್ಟಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊನ್ನೆ ತಮ್ಮ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ, ವಿದೇಶಿ ಬ್ಯಾಂಕುಗಳಲ್ಲಿ ಸರಿಯಾಗಿ ಹೆಸರು ಮತ್ತು ದಾಖಲೆಗಳಿಲ್ಲದ ಸುಮಾರು 6 ಸಾವಿರದ 500 ಕೋಟಿ ರೂಪಾಯಿ ಹಣ ಪತ್ತೆಯಾಗಿದೆ ಎಂದು ಹೇಳಿದ್ದರು.

ವಿದೇಶಗಳಲ್ಲಿ ಕೆಲವು ವರ್ಷಗಳಿದ್ದು, ಅಲ್ಲಿನ ಸಾಮಾಜಿಕ ಭದ್ರತೆ ಯೋಜನೆಗಳಡಿಯಲ್ಲಿ ಹಣ ಹೂಡಿಕೆ ಮಾಡಿ ಭಾರತಕ್ಕೆ ಮರಳಿದ ನಾಗರಿಕರಿಂದ ಸಂದೇಹಾತ್ಮಕ ಪ್ರಶ್ನೆಗಳನ್ನು ಐಟಿ ಇಲಾಖೆ ಎದುರಿಸಿದೆ.

ಕೇಂದ್ರ ನೇರ ತೆರಿಗೆ ಇಲಾಖೆ ಮೊದಲ ಪ್ರಶ್ನೋತ್ತರಗಳನ್ನು ಜುಲೈ 6ರಂದು ಬಿಡುಗಡೆ ಮಾಡಿದ್ದು, ಅದರಲ್ಲಿ ಕಪ್ಪು ಹಣ ಕಾನೂನಿಗೆ ಸಂಬಂಧಪಟ್ಟ ಸಾರ್ವಜನಿಕರ ಸುಮಾರು 32 ಪ್ರಶ್ನೆಗಳಿಗೆ ಉತ್ತರಿಸಿತ್ತು.

SCROLL FOR NEXT