ಮುಂಬೈ: ಶನಿವಾರ ಬೆಳಗ್ಗೆಯಷ್ಟೇ ಭಾರಿ ಚೇತರಿಕೆ ಕಂಡಿದ್ದ ಸೆನ್ಸೆಕ್ಸ್ ಬಜೆಟ್ ಮಂಡನೆ ಮುಕ್ತಾಯಗೊಳ್ಳುತ್ತಿದ್ದಂತೆಯೇ ಕುಸಿತಗೊಂಡಿದೆ.
ಪ್ರಸಕ್ತ ಸಾಲಿನ ಆರ್ಥಿಕ ಸಮೀಕ್ಷೆ ಪ್ರಕಟಗೊಂಡ ಹಿನ್ನಲೆಯಲ್ಲಿ ಇಂದು ಬೆಳಗ್ಗೆ ಭಾರತೀಯ ಷೇರುಮಾರುಕಟ್ಟೆಯಲ್ಲಿ ಭಾರಿ ಚೇತರಿಕೆ ಕಂಡುಬಂದಿತ್ತು. ಸೆನ್ಸೆಕ್ಸ್ 473 ಅಂಕಗಳಿಸುವ ಮೂಲಕ 29 ಸಾವಿರ ಗಡಿಯನ್ನು ದಾಟಿತ್ತು. ನಿಫ್ಟಿ ಕೂಡ 161 ಅಂಕಗಳ ಗಳಿಕೆಯೊಂದಿಗೆ 8, 800 ಗಡಿ ದಾಟಿತ್ತು. ಆದರೆ ದೆಹಲಿಯ ಸಂಸತ್ ಭವನದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು 2015ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಿ ಮುಗಿಸುತ್ತಿದ್ದಂತೆಯೇ ಸೆನ್ಸೆಕ್ಸ್ ಕುಸಿತಗೊಂಡಿದೆ.
ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು, ಅಗತ್ಯ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸೇವಾ ತೆರಿಗೆ ಪ್ರಮಾಣವನ್ನು 12.36ರಿಂದ ಶೇ.14ಕ್ಕೆ ಸೇವಾ ತೆರಿಗೆ ಏರಿಕೆ ಮಾಡಲಾಗಿದೆ.
ಹೀಗಾಗಿ ಬಜೆಟ್ ಮೇಲಿನ ನಿರೀಕ್ಷೆಗಳು ಹುಸಿಗೊಂಡ ಹಿನ್ನಲೆಯಲ್ಲಿ ಷೇರುಮಾರುಕಟ್ಟೆ ಕುಸಿತಕಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಧ್ಯಾಹ್ನ 1.30ರ ಸುಮಾರಿಗೆ ವಹಿವಾಟು ಆರಂಭಗೊಂಡಾಗ ಸೆನ್ಸೆಕ್ಸ್ 312.07 ಅಂಕಗಳನ್ನು ಕಳೆದುಕೊಳ್ಳುವುದರೊಂದಿಗೆ 29, 128ಗಳಿಗೆ ಕುಸಿಯಿತು. ಸೆನ್ಸೆಕ್ಸ್ ಕೂಡ 18 ಅಂಕಗಳನ್ನು ಕಳೆದುಕೊಂಡು 8, 765 ಅಂಕಗಳಿಗೆ ಸ್ಥಿರಗೊಂಡಿತು.
ಪ್ರಮುಖ ಸಂಸ್ಥೆಗಳಾದ ಹೆಚ್ ಡಿಎಫ್ ಸಿ, ಹೆಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್ ಬಿಐ, ಆಕ್ಸಿಸ್ ಬ್ಯಾಂಕ್ ಗಳ ಷೇರುಗಳು ಶೇ1-2 ಏರಿಕೆಯಾಗಿವೆ.