ನ್ಯೂಯಾರ್ಕ್: ಬಿಲಿಯನ್ ಲೆಕ್ಕಾಚಾರದ ಆಟದಲ್ಲಿ ಕ್ಯಾಂಡಿಕ್ರ್ಯಾಶ್ ಗೇಮ್ ಗೆದ್ದಿದೆ. ಅದೂ ಯಾವುದೇ `ಲೈಫ್' ಇಲ್ಲ ದೇ! ಈ ಮೂಲಕ ಕಿಂಗ್ ಕಂಪನಿಯ ಈ ಗೇಮ್ ನಿಜವಾಗಿಯೂ ಕಿಂಗ್ ಎನ್ನಿಸಿಕೊಂಡಿದೆ.
ಮಂಗಳವಾರ ಮುಗಿದಿರುವ ಬಹುದೊಡ್ಡ ಡೀಲ್ನಲ್ಲಿ ಕ್ಯಾಂಡಿಕ್ರ್ಯಾಶ್ ಕಂಪನಿಯ ಪೇರೆಂಟ್ ಕಂಪನಿ ಕಿಂಗ್ ಡಿಜಿಟಲ್ ಆ್ಯಕ್ಟಿವಿಷನ್ ಬ್ಲಿಜಾರ್ಡ್ ಕಂಪನಿಗೆ 5.9 ಬಿಲಿಯನ್ ಡಾಲರ್, ಅಂದರೆ ಭಾರತೀಯ ಲೆಕ್ಕಾಚಾರದಲ್ಲಿ ರು.38,724 ಕೋಟಿಗೆ ಸೇಲಾಗಿದೆ. ವಿಚಾರವೆಂದರೆ, ಆಕ್ಟಿವಿಷನ್ ಬ್ಲಿಜಾರ್ಡ್ ಕಂಪನಿ ಕೂಡ ಗೇಮ್ ಗಳಿಗೆ ಪ್ರಸಿದ್ಧವಾದದ್ದು.
ವಲ್ರ್ಡ್ ಆಫ್ ವಾರ್ ಕ್ರಾಫ್ಟ್, ಕಾಲ್ ಆಫ್ ಡ್ಯೂಟಿ, ಡಿಯಾಬ್ಲೋ ಮುಂತಾದ ಜನಪ್ರಿಯ ಗೇಮ್ ಗಳನ್ನು ತಯಾರಿಸಿ ಖ್ಯಾತಿ ಪಡೆದಿರುವ ಆ್ಯಕ್ಟಿವಿಷನ್ ಕಿಂಗ್ ಡಿಜಿಟಲ್ ಅನ್ನು ಅದರ ಮಾರುಕಟ್ಟೆ ಬೆಲೆಗಿಂತ ಒಂದು ಬಿಲಿಯನ್ ಡಾಲರ್ ಅಧಿಕ ಮೊತ್ತ ಕೊಟ್ಟು ಖರೀದಿಸಿರುವುದು ಇಲ್ಲಿ ಉಲ್ಲೇಖಾರ್ಹ. ಕ್ಯಾಂಡಿ ಕ್ರಷ್‍ಗೇಮ್ ಪ್ರಖ್ಯಾತಿಯನ್ನು ಗಣನೆಯಲ್ಲಿಟ್ಟುಕೊಂಡು ನಿರೀಕ್ಷಿತ ಆದಾಯ ಏರಿಕೆ ಖಾತ್ರಿಯಾಗಿದ್ದರಿಂದಲೇ ಈ ವ್ಯವಹಾರ ಒಪ್ಪಂದ ಮಾಡಿಕೊಂಡಿರುವುದಾಗಿ ಬ್ಲಿಜಾರ್ಡ್‍ನ ಪ್ರತಿನಿಧಿ ಬಾಬ್ಬಿ ಕೊಟಿಕ್ ತಿಳಿಸಿದ್ದಾರೆ.
ಈ ಹಿಂದೆ ಡಿಸ್ನಿ 4 ಬಿಲಿಯನ್ ಡಾಲರ್‍ಗೆ ಲ್ಯೂಕಸ್ ಫಿಲ್ಮ್ ಕಂಪನಿಯನ್ನು, ಮೈಕ್ರೋಸಾಫ್ಟ್ 2.5 ಬಿಲಿಯನ್ ಡಾಲರ್‍ಗೆ ಮೋಜಂಗ್‍ಅನ್ನು, ಅಮೇಜಾನ್ ಕಂಪನಿ ಟ್ವಿಚ್ ಕಂಪನಿಯನ್ನು 1
ಬಿಲಿಯನ್ ಡಾಲರ್‍ಗೆ ಖರೀದಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಕೇವಲ ಒಂದೇ ಖ್ಯಾತ ಉತ್ಪನ್ನವಿರುವ ಕಂಪನಿ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ದಾಖಲೆ ಎನ್ನಲಾಗುತ್ತಿದೆ. ಕಿಂಗ್ಸ್ ಕಂಪನಿಗೆ 47.40 ಕೋಟಿ ಕ್ರಿಯಾತ್ಮಕ ಬಳಕೆದಾರರಿದ್ದು ಇಷ್ಟು ಮಂದಿ ತಮ್ಮ ಯೂಸರ್ ಅಕೌಂಟ್ ಹೊಂದಿದ್ದಾರೆ.
ಕಳೆದ ಮೂರು ತಿಂಗಳಲ್ಲಿ 2.5ಕೋಟಿ ಇಳಿಕೆಯಾಗಿದೆ. ಕಂಪನಿಯ ಆದಾಯ ಮತ್ತು ಲಾಭಾಂಶವೂ ಕುಸಿತ ಕಂಡಿದೆ. ಇಂಥ ಪರಿಸ್ಥಿತಿಯಲ್ಲೂ ಭಾರಿ ಮೊತ್ತಕ್ಕೆ ಕಿಂಗ್ ಕಂಪನಿಯನ್ನು ಬ್ಲಿಜಾರ್ಡ್ ಖರೀದಿಸಿರುವುದು ವಾಣಿಜ್ಯವಲಯದಲ್ಲಿ ಅಚ್ಚರಿ ಉಂಟುಮಾಡಿದೆ.