ನವದೆಹಲಿ: ರಘುರಾಮ್ ರಾಜನ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ ನ ಮುಖ್ಯಸ್ಧರಾಗಿದ್ದಾರೆ. ಅವರು ಎಲ್ಲರಿಗಿಂತಲೂ ಹೆಚ್ಚಿನ ವೇತನ ಪಡೆಯುತ್ತಿರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಮುಖ್ಯಸ್ಥನಾಗಿದ್ದರೂ ಹಿರಿಯ ಅಧಿಕಾರಿಗಿಂತಲೂ ಕಡಿಮೆ ವೇತನ ಪಡೆಯುತ್ತಿದ್ದಾರೆಂಬ ಸತ್ಯ ಸೋಮವಾರ ಬಯಲಾಗಿದೆ.
ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಆರ್‌ಬಿಐ ಪ್ರಕಟಿಸಿರುವ ಅಧಿಕಾರಿಗಳ ಮಾಸಿಕ ವೇತನ ಪಟ್ಟಿಯಲ್ಲಿ ಈ ವಿಚಾರ ಉಲ್ಲೇಖವಾಗಿದ್ದು, ರಾಜನ್ ಮಾಸಿಕ 1,98,700 ರೂ. ವೇತನ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.
ಇದರಲ್ಲಿ ಮೂಲವೇತನ ರು. 90 ಸಾವಿರ, ತುಟ್ಟಿ ಭತ್ಯೆ 1,01,700 ಹಾಗೂ ಇತರೆ ಭತ್ಯೆಗಳ ರೂಪದಲ್ಲಿ 7 ಸಾವಿರ ಸಿಗುತ್ತದೆ. ರಾಜನ್‌ಗೆ ಹೋಲಿಸಿದರೆ ಆರ್‌ಬಿಐನ ಇತರ ಅಧಿಕಾರಿಗಳು ಹೆಚ್ಚಿನ ವೇತನ ಪಡೆಯುತ್ತಿದ್ದಾರೆ.
ಗೋಪಾಲಕೃಷ್ಣ ಸೀತಾರಾಂ ಹೆಗ್ಡೆ (4 ಲಕ್ಷ ರೂ.) ಅಣ್ಣಾಮಲೈ ಅರಾಪ್ಪುಲಿ ಗೌಂಡರ್ (2,20,355 ರೂ.) ಹಾಗೂ ವಿ.ಕಂದಸ್ವಾಮಿ (2.1ಲಕ್ಷ ರೂ) ವೇತನ ಪಡೆಯುತ್ತಿದ್ದಾರೆ. 2015ರ ಜೂನ್-ಜುಲೈ ವೇತನ ಮಾಹಿತಿ ಇದಾಗಿದೆ. ಮೂವರು ಹಿರಿಯ ಅಧಿಕಾರಿಗಳ ಹೆಸರು, ವೇತನದ ಮಾಹಿತಿ ನೀಡಲಾಗಿದ್ದರೂ ಅವರ ಹುದ್ದೆ ಕುರಿತು ಸ್ಪಷ್ಟ ವಿವರಣೆ ಸಿಕ್ಕಿಲ್ಲ. ಸೀತಾರಾಂ ಹೆಗ್ಡೆ ಈ ಹಿಂದೆ ‘ಕಾನೂನು ಸಲಹೆಗಾರರಾಗಿ’ದ್ದರು ಎನ್ನಲಾಗಿದೆ. ಆರ್‌ಬಿಐನ ವಕ್ತಾರ ಅಲ್ಪಾನಾ ಕಿಲ್ಲಾವಾಲಾ ವೇತನ ಸಂಸ್ಥೆಯ ನಾಲ್ವರು ಡೆಪ್ಯುಟಿ ಗವರ್ನರ್, ಕಾರ್ಯಕಾರಿ ನಿರ್ದೇಶಕರಿಗಿಂತ ಹೆಚ್ಚಿದೆ.