ನವದೆಹಲಿ: ಟಾಟಾ ಸ್ಟೀಲ್ ಸಂಸ್ಥೆಯ ಸ್ವತಂತ್ರ ನಿರ್ದೇಶಕರಾಗಿದ್ದ ಉದ್ಯಮಿ ನುಸ್ಲಿ ವಾಡಿಯಾ ಅವರನ್ನು ಟಾಟಾ ಸ್ಟೀಲ್ ನಿರ್ದೇಶಕ ಮಂಡಳಿಯಿಂದ ವಜಾಗೊಳಿಸಿರುವುದನ್ನು ಟಾಟಾ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ.
ಡಿ.21 ರಂದು ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಶೇ.90.8 ರಷ್ಟು ಷೇರುದಾರರು ವಾಡಿಯಾ ಅವರನ್ನು ಮಂಡಳಿಯಿಂದ ವಜಾಗೊಳಿಸುವುದರ ಪರವಾಗಿ ಮತ ಚಲಾವಣೆ ಮಾಡಿದ್ದು, ವಾಡಿಯಾ ಅವರನ್ನು ಟಾಟಾ ಸ್ಟೀಲ್ ಮಂಡಳಿಯಿಂದ ಹೊರಹಾಕಲಾಗಿದೆ.
ಸಂಸ್ಥೆಯ ಒಟ್ಟು 97.12 ಕೋಟಿ ಷೇರುಗಳ ಪೈಕಿ 62.54 ಕೋಟಿಯಷ್ಟು ಷೇರು ಹೊಂದಿರುವ ಷೇರುದಾರರು ಮತಚಲಾವಣೆ ಮಾಡಿದ್ದಾರೆ. ಈ ಪೈಕಿ 56.79 ಕೋಟಿಯಷ್ಟು ಷೇರು ಹೊಂದಿರುವವರು ಅಂದರೆ ಶೇ.90 ರಷ್ಟು ಷೇರುದಾರರು ವಾಡಿಯಾ ವಜಾ ಪರವಾಗಿ ಮತಚಲಾವಣೆ ಮಾಡಿದ್ದರೆ, 5.75 ಕೋಟಿಯಷ್ಟು ಷೇರು ಹೊಂದಿರುವವರು ಅಂದರೆ ಶೇ.9.20 ರಷ್ಟು ಷೇರುದಾರರು ಮಾತ್ರ ವಾಡಿಯಾ ವಜಾ ವಿರುದ್ಧ ಮತಚಲಾವಣೆ ಮಾಡಿದ್ದರು, ಬಹುಮತದ ಆಧಾರದಲ್ಲಿ ಸಂಸ್ಥೆ ವಾಡಿಯಾ ಅವರನ್ನು ಟಾಟಾ ಮಂಡಳಿಯಿಂದ ವಜಾಗೊಳಿಸಿದೆ ಎಂದು ಸಂಸ್ಥೆ ತಿಳಿಸಿದೆ.
ಡಿ.21 ರಂದು ನಡೆದ ವಿಶೇಷ ಸಭೆಯಿಂದ ದೂರ ಉಳಿದಿದ್ದ ನುಸ್ಲಿ ವಾಡಿಯಾ ಸಭೆಯನ್ನು ಹಾಗೂ ಸಭೆಯ ಫಲಿತಾಂಶವನ್ನು ಪೂರ್ವನಿಯೋಜಿತವೆಂದು ಹೇಳಿದ್ದರು.