ನವದೆಹಲಿ: ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಲಾವಣೆಯಲ್ಲಿದ್ದ 15.4 ಲಕ್ಷ ಕೋಟಿ ಮೌಲ್ಯದ 500 ಹಾಗೂ 1000 ರುಪಾಯಿ ನೋಟ್ ಗಳನ್ನು ನಿಷೇಧಿಸಿದ ನಂತರ 14 ಲಕ್ಷ ಕೋಟಿ ಮೌಲ್ಯದ ನಿಷೇಧಿತ ನೋಟ್ ಗಳು ಬ್ಯಾಂಕ್ ಗೆ ಜಮೆಯಾಗಿವೆ.
ಕೇಂದ್ರ ಸರ್ಕಾರ ದೇಶದಲ್ಲಿ ಸುಮಾರು ಮೂರು ಲಕ್ಷ ಕೋಟಿ ಕಪ್ಪು ಹಣವಿರುವ ನಿರೀಕ್ಷೆ ಇತ್ತು. ಆದರೆ ಇದೀಗ ಸರ್ಕಾರದ ನಿರೀಕ್ಷೆ ಮೀರಿ ನಿಷೇಧಿತ ನೋಟ್ ಗಳು ಬ್ಯಾಂಕ್ ಗೆ ಜಮೆಯಾಗಿದ್ದು, ಆರ್ ಬಿಐಯಿಂದ ಸರ್ಕಾರಕ್ಕೆ ಗಣನೀಯ ಲಾಭಾಂಶ ದೊರೆಯುವ ಸಾಧ್ಯತೆ ಕಡಿಮೆ. ಆದರೆ 2.5ಲಕ್ಷಕ್ಕಿಂತ ಹೆಚ್ಚು ಹಣ ಜಮೆ ಮಾಡಿದ ದಾಖಲೆ ಇಲ್ಲದ ಹಣದ ಮೇಲೆ ತೆರಿಗೆ ಸಂಗ್ರಹಿಸಲು ಸರ್ಕಾರ ಮುಂದಾಗಿದೆ.
ಕಪ್ಪು ಹಣ ಘೋಷಣೆ ಯೋಜನೆಯಡಿ ಕನಿಷ್ಠ ಶೇ.50 ರಷ್ಟು ತೆರಿಗೆ ಹಾಗೂ ದಂಡ ಕಟ್ಟಿ ಕಪ್ಪು ಹಣವನ್ನು ಘೋಷಿಸಿಕೊಳ್ಳಲು ಮಾರ್ಚ್ 31, 2017ರವರೆಗೆ ಅವಕಾಶ ನೀಡಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿ ಮೂರು ವಾರಗಳ ನಂತರ ವಿತ್ತ ಸಚಿವ ಅರುಣ್ ಜೇತ್ಲಿ ಅವರ ಆದಾಯ ತೆರಿಗೆ ಕಾಯಿದೆಯ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದು, ಅಪನಗದೀಕರಣೋತ್ತರ ಹಣ ಜಮಾವಣೆಯ ಮೇಲೆ ಅದರ ಶೇ.50ರ ಪ್ರಮಾಣದಲ್ಲಿ ವಿಧಿಸಲ್ಪಡುವ ಒಟ್ಟು ತೆರಿಗೆ, ದಂಡ ಮತ್ತು ಸರ್ಚಾರ್ಜ್ ಪ್ರಮಾಣವನ್ನು ಪ್ರಸ್ತಾವಿಸಿದ್ದರು.
2016ರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಕಪ್ಪು ಹಣವನ್ನು ಘೋಷಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ತಮ್ಮ ಅಘೋಷಿತ ಕಪ್ಪು ಹಣದ ಆದಾಯದ ಮೇಲೆ ಶೇ. 50 ತೆರಿಗೆ ಪಾವತಿಸಬೇಕಾಗುವುದು. ಅಲ್ಲದೆ ಹೆಚ್ಚುವರಿಯಾಗಿ ಶೇ.10ರ ದಂಡ ಮತ್ತು ಶೇ.33ರ ಪ್ರಮಾಣದಲ್ಲಿ ಪಿಎಂಜಿಕೆ ಸೆಸ್ (ಎಂದರೆ ಇದು ಶೇ.30ರ ಮೇಲಿನ ಶೇ.33 ಪ್ರಮಾಣ) ಪಾವತಿಸಬೇಕಾಗುವುದು ಎಂದು ಜೇಟ್ಲಿ ತಿಳಿಸಿದ್ದರು.