ಮುಂಬೈ: ಎರಡನೇ ಅವಧಿಗೆ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಯನ್ನು ಅಲಂಕರಿಸುವ ಇಚ್ಚೆಯಿಲ್ಲ ಎಂದಿರುವ ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಅವರು, ಸೆಪ್ಟೆಂಬರ್ 4ರಂದು ಕೇಂದ್ರೀಯ ಬ್ಯಾಂಕ್ ನಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಶನಿವಾರ ಹೇಳಿದ್ದಾರೆ.
ಸಾಕಷ್ಟ ಗೊಂದಲಕ್ಕೆ ಕಾರಣವಾಗಿದ್ದ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಯನ್ನು ಎರಡನೇ ಬಾರಿ ಮುಂದುವರಿಸಲು ರಘುರಾಮ್ ರಾಜನ್ ಹಿಂದೇಟು ಹಾಕಿದ್ದು, ತಮ್ಮ ಅವಧಿ ಮುಗಿದ ಬಳಿಕ ಶೈಕ್ಷಣಿಕ ಕ್ಷೇತ್ರಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.
‘ಈ ವರ್ಷದ ಸೆಪ್ಟೆಂಬರ್ 4ಕ್ಕೆ ನನ್ನ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ಬಳಿಕ ನಾನು ಶೈಕ್ಷಣಿಕ ಕ್ಷೇತ್ರಕ್ಕೆ ಮರಳಬೇಕೆಂದಿದ್ದೇನೆ. ಈ ಕುರಿತು ಸರ್ಕಾರದೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ರಾಜನ್ ಅವರು ಆರ್‌ಬಿಐ ಸಿಬ್ಬಂದಿಗೆ ಕಳಿಸಿರುವ ಸಂದೇಶದಲ್ಲಿ ತಿಳಿಸಿದ್ದಾರೆ.
ನಾನು ಅಧಿಕಾರಕ್ಕೆ ಬಂದ ಬಳಿಕ ಸಾಕಷ್ಟು ಪ್ರಗತಿಪರ ಕೆಲಸದಲ್ಲಿ ತೊಡಗಿದ್ದೇನೆ, ನಾನು ಈ ಹುದ್ದೆಯನ್ನು ಅಲಂಕರಿಸಿದ ಸಮಯದಲ್ಲಿ ಹಣದುಬ್ಬರ ಹೆಚ್ಚಾಗಿತ್ತು, ಆರ್ಥಿಕ ಪ್ರಗತಿ ಕುಂಠಿತವಾಗಿತ್ತು. ಆದರೆ ಈಗ ಹಣದುಬ್ಬರ ನಿಯಂತ್ರಿಸುವಲ್ಲಿ ನಾವು ಸಾಕಷ್ಟು ಸಫಲತೆಯನ್ನು ಕಂಡಿದ್ದೇವೆ. ಈ ಬಗ್ಗೆ ನನಗೆ ಹೆಮ್ಮೆ ಇದೆ" ಎಂದು ಸಂದೇಶದಲ್ಲಿ ರಾಜನ್ ಹೇಳಿದ್ದಾರೆ. ರಾಜನ್ ಸಂದೇಶವನ್ನು ಆರ್ ಬಿಐ ತನ್ನ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿದೆ.
2013ರ ಸೆಪ್ಟೆಂಬರ್ 23ರಂದು ರಾಜನ್ ಆರ್‌ಬಿಐನ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು.