ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ವೃತ್ತಿ ಜೀವನದ ಆರಂಭ, ಅಂತ್ಯಕ್ಕೆ "ಬೆಂಗಳೂರೇ ದಿ ಬೆಸ್ಟ್"!

ಇಡೀ ಭಾರತ ದೇಶದಲ್ಲೇ ಔದ್ಯೋಗಿಕ ವೃತ್ತಿ ಆರಂಭಕ್ಕೂ ಮತ್ತು ವೃತ್ತಿ ಅಂತ್ಯಕ್ಕೂ ಸಿಲಿಕಾನ್ ಸಿಟಿ ಬೆಂಗಳೂರು ಅತ್ಯುತ್ತಮ ಎಂದು ಖ್ಯಾತ ಮಾನವ ಸಂಪನ್ಮೂಲ ಸಲಹಾ ಸಂಸ್ಥೆ ಹೇಳಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 11 Apr 2017, 12:31 pm

ಬೆಂಗಳೂರು: ಇಡೀ ಭಾರತ ದೇಶದಲ್ಲೇ ಔದ್ಯೋಗಿಕ ವೃತ್ತಿ ಆರಂಭಕ್ಕೂ ಮತ್ತು ವೃತ್ತಿ ಅಂತ್ಯಕ್ಕೂ ಸಿಲಿಕಾನ್ ಸಿಟಿ ಬೆಂಗಳೂರು ಅತ್ಯುತ್ತಮ ಎಂದು ಖ್ಯಾತ ಮಾನವ ಸಂಪನ್ಮೂಲ ಸಲಹಾ ಸಂಸ್ಥೆ  ಹೇಳಿದೆ.

ಇಡೀ ಭಾರತದಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉದ್ಯೋಗಿಗಳನ್ನು ಗೌರವಯುತವಾಗಿ ಮತ್ತು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು "ರ‍್ಯಾಂಡ್ ಸ್ಟಡ್" ಸಂಸ್ಥೆ ಹೇಳಿದ್ದು, ಬೆಂಗಳೂರಿನ ಉದ್ಯೋಗಿಗಳಿಗೆ ಉತ್ತಮ  ವೇತನವನ್ನು ಕೂಡ ನೀಡಲಾಗುತ್ತಿದೆ ಎಂದು ತನ್ನ ವರದಿಯಲ್ಲಿ ಹೇಳಿದೆ.

"ರ‍್ಯಾಂಡ್ ಸ್ಟಡ್" ಸಂಸ್ಥೆಯ ವೇತನದ ಕುರತ ಅಧ್ಯಯನದಲ್ಲಿ ಬೆಂಗಳೂರು ನಗರದ ಉದ್ಯೋಗಿಗಳ ಸರಾಸರಿ ವೇತನ (annual cost to company) ರು.14.6 ಲಕ್ಷ ದಷ್ಟಿದ್ದು, ಇದು ಭಾರತದ ಇತರೆ ನಗರಗಳಿಗೆ ಹೋಲಿಕೆ  ಮಾಡಿದರೆ ಗರಿಷ್ಠ ಪ್ರಮಾಣದ್ದಾಗಿದೆ. ಆ ಮೂಲಕ ಬೆಂಗಳೂರು ದೇಶದ ವಾಣಿಜ್ಯ ರಾಜಧಾನಿ ಮುಂಬೈ (ಸಿಟಿಸಿ 14.2 ಲಕ್ಷ ರು.)ಅನ್ನು ಕೂಡ ಹಿಂದಿಕ್ಕಿದ್ದು, ಹೈದರಾಬಾದ್ (13.6 ಲಕ್ಷ ರು.), ರಾಜಧಾನಿ ದೆಹಲಿ (13.5 ಲಕ್ಷ ರು.),  ಗುರುಗ್ರಾಮ ಮತ್ತು ನೊಯ್ಡಾ ನಗರಗಳು ನಂತರದ ಸ್ಥಾನದಲ್ಲಿವೆ.

ಉಳಿದಂತೆ ಚೆನ್ನೈ (13.4 ಲಕ್ಷ ರು), ಪುಣೆ (13.2 ಲಕ್ಷ ರು,)ಮತ್ತು ಕೋಲ್ಕತಾ (11.4 ಲಕ್ಷ ರು.) ನಗರಗಳು 5, 6 ಮತ್ತು ಏಳನೇ ಸ್ಥಾನದಲ್ಲಿವೆ.

ಅಂತೆಯೇ ಬೆಂಗಳೂರಿನ ಸೀನಿಯರ್ ಲೆವೆಲ್ ಉದ್ಯೋಗಿಗಳು ಮತ್ತು ಜೂನಿಯಲ್ ಶ್ರೇಣಿಯ ಉದ್ಯೋಗಿಗಳು ಕೂಡ ದೇಶದ ಇತರೆ ನಗರಗಳ ಉದ್ಯೋಗಿಗಳಿಗಿಂತಲೂ ಉತ್ತಮ ವೇತನ ಶ್ರೇಣಿ ಪಡೆಯುತ್ತಿದ್ದು, ಇದರಲ್ಲೂ  ಬೆಂಗಳೂರು ಅಗ್ರ ಸ್ಥಾನದಲ್ಲಿದೆ ಎಂದು "ರ‍್ಯಾಂಡ್ ಸ್ಟಡ್" ವರದಿ ಹೇಳಿದೆ. 15 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ ಉದ್ಯೋಗಿಗಳ ವೇತನ ಶ್ರೇಣಿ ಬೆಂಗಳೂರಿನಲ್ಲಿ ಸರಾಸರಿ 28 ಲಕ್ಷ ರುಗಳಿದ್ದು, 2ನೇ ಸ್ಥಾನದಲ್ಲಿರುವ  ಮುಂಬೈ ನಲ್ಲಿ ವೇತನ ಶ್ರೇಣಿ 27 ಲಕ್ಷ ರುಗಳಷ್ಟಿದೆ. ಉಳಿದಂತೆ ಹೈದರಾಬಾದ್ (26.8 ಲಕ್ಷ), ಪುಣೆ (25.5 ಲಕ್ಷ) ನಂತರದ ಸ್ಥಾನಗಳಲ್ಲಿವೆ.

6 ರಿಂದ 15 ವರ್ಷಗಳವರೆಗೆ ಅನುಭವ ಇರುವ ಉದ್ಯೋಗಿಗಳ ಪಟ್ಟಿಯಲ್ಲಿ ಮಾತ್ರ ಬೆಂಗಳೂರು ಎರಡನೇ ಸ್ಥಾನದಲ್ಲಿದ್ದು, ಅಗ್ರ ಸ್ಥಾನದಲ್ಲಿ ಮುಂಬೈನಲ್ಲಿ ಈ ಶ್ರೇಣಿಯ ಉದ್ಯೋಗಿಗಳ ವೇತನ ವಾರ್ಷಿಕ ಸರಾಸಕಿ 10.5 ಲಕ್ಷ  ರುಗಳಷ್ಟಿದೆ. ಬೆಂಗಳೂರಿನಲ್ಲಿ ವಾರ್ಷಿಕ ವೇತನ ಸರಾಸರಿ 10.4 ಲಕ್ಷ ರುಗಳಷ್ಟಿದ್ದು, ಮೂರನೇ ಸ್ಥಾನದಲ್ಲಿರುವ ಚೆನ್ನೈನಲ್ಲಿ 10.3 ಲಕ್ಷ ರುಗಳಷ್ಟಿದೆ. ಇನ್ನು ಜೂನಿಯರ್ ಲೆವೆವ್ ಉದ್ಯೋಗಿಗಳು ಅಂದರೆ ಕಿರಿಯ ಶ್ರೇಣಿಯ  ಉದ್ಯೋಗಿಗಳ ವಾರ್ಷಿಕ ವೇತನ ಸರಾಸರಿಯಲ್ಲೂ ಬೆಂಗಳೂರು ಅಗ್ರ ಸ್ಥಾನದಲ್ಲಿದ್ದು, ಬೆಂಗಳೂರಿನ ಕಿರಿಯ ಉದ್ಯೋಗಿಗಳ ವಾರ್ಷಿಕ ವೇತನ ಶ್ರೇಣಿ ಸರಾಸರಿ 5.5 ಲಕ್ಷ ರುಗಳಷ್ಟಿದೆ. ಈ ಪಟ್ಟಿಯಲ್ಲಿ ವಾಣಿಜ್ಯ ರಾಜಧಾನಿ ಮುಂಬೈ  ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು, ಅಲ್ಲಿ 5.1 ಲಕ್ಷ ರುಗಳನ್ನು ನೀಡಲಾಗುತ್ತಿದೆ.

ಖ್ಯಾತ ಮಾನವ ಸಂಪನ್ಮೂಲ ಸಲಹಾ ಸಂಸ್ಥೆ "ರ‍್ಯಾಂಡ್ ಸ್ಟಡ್" ಸುಮಾರು ಒಂದು ಸಾವಿರಕ್ಕೂ ಅಧಿಕ ಉದ್ಯೋಗಳನ್ನು ವಿಶ್ಲೇಷಿಸಿದ್ದು, ದೇಶಾದ್ಯಂತ ಇರುವ ಪ್ರಮುಖ 15 ಸಮೂಹ ಸಂಸ್ಥೆಗಳು ಹಾಗೂ 20 ಕ್ಕೂ ಪ್ರಮುಖ  ವಲಯಗಳಲ್ಲಿನ  ವೇತನ ಶ್ರೇಣಿಯನ್ನು ಅವಲೋಕಿಸಿದೆ. ಕೇವಲ ಉದ್ಯೋಗ ಆರಂಭಕ್ಕೆ ಮಾತ್ರವಲ್ಲ ಔದ್ಯೋಗಿಕ ಜೀವನದ ಅಂತ್ಯಕ್ಕೂ ಬೆಂಗಳೂರು ಅತ್ಯುತ್ತಮ ಎಂದು ವರದಿಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement