ಒಪ್ಪಂದ ತಕರಾರು: ಭಾರತದಲ್ಲಿರುವ 169 ಮೆಕ್ ಡೊನಾಲ್ಡ್ ರೆಸ್ಟೋರೆಂಟ್ ಗಳಿಗೆ ಬೀಗ!
ಖ್ಯಾತ ಬಹುರಾಷ್ಟ್ರೀಯ ಸಿದ್ಧ ತಿನಿಸುಗಳ ಸಂಸ್ಥೆ ಮೆಕ್ ಡೊನಾಲ್ಡ್ ಭಾರತದಲ್ಲಿ ತಾನು ಹೊಂದಿರುವ ಸುಮಾರು 169 ರೆಸ್ಟೋರೆಂಟ್ ಗಳನ್ನು ಮುಚ್ಚಲಿದೆ ಎಂದು ತಿಳಿದುಬಂದಿದೆ.
ನವದೆಹಲಿ: ಖ್ಯಾತ ಬಹುರಾಷ್ಟ್ರೀಯ ಸಿದ್ಧ ತಿನಿಸುಗಳ ಸಂಸ್ಥೆ ಮೆಕ್ ಡೊನಾಲ್ಡ್ ಭಾರತದಲ್ಲಿ ತಾನು ಹೊಂದಿರುವ ಸುಮಾರು 169 ರೆಸ್ಟೋರೆಂಟ್ ಗಳನ್ನು ಮುಚ್ಚಲಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಮೆಕ್ ಡೊನಾಲ್ಡ್ ಸಂಸ್ಥೆ ಭಾರತದ ವಿವಿಧೆಡೆ ತನ್ನ ರೆಸ್ಟೋರೆಂಟ್ ತೆರೆಯಲು ಭಾರತ ಮೂಲದ ಕನಾಟ್ ಪ್ಲಾಜಾ ರೆಸ್ಟೊರೆಂಟ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಕಳೆದ 23 ವರ್ಷಗಳಿಂದ ಈ ಒಪ್ಪಂದದ ಅನ್ವಯ ಭಾರತದ ವಿವಿಧೆಡೆ ಕನಾಟ್ ಪ್ಲಾಜಾ ರೆಸ್ಟೊರೆಂಟ್ (ಸಿಸಿಪಿಆರ್ಎಲ್) ಸಂಸ್ಥೆ ಮೆಕ್ ಡೊನಾಲ್ಡ್ ಹೆಸರಿನಲ್ಲಿ ತಿನಿಸುಗಳನ್ನು ಮಾರಾಟ ಮಾಡುತ್ತಿತ್ತು. ಇದೀಗ ಸಿಸಿಪಿಆರ್ ಮೆಕ್ ಡೊನಾಲ್ಡ್ ನಡುವಿನ ಒಪ್ಪಂದವನ್ನು ಉಲ್ಲಂಘನೆ ಮಾಡಿದೆ ಎಂದು ಮೆಕ್ ಡೊನಾಲ್ಡ್ ಆರೋಪಿಸಿದ್ದು, ಒಪ್ಪಂದವನ್ನು ಹಿಂದಕ್ಕೆ ಪಡೆದಿದೆ.
ಹೀಗಾಗಿ ಸಿಸಿಪಿಆರ್ ಸಂಸ್ಥೆ ತಾನು ನಡೆಸುತ್ತಿದ್ದ ಎಲ್ಲ ಮೆಕ್ ಡೊನಾಲ್ಡ್ ರೆಸ್ಟೋರೆಂಟ್ ಗಳನ್ನು ಶೀಘ್ರದಲ್ಲಿ ಸ್ಥಗಿತಗೊಳಿಸಬೇಕಿದೆ. ಮೂಲಗಳ ಪ್ರಕಾರ ಸಿಸಿಪಿಆರ್ಎಲ್ ಸಂಸ್ಥೆ ಭಾರತದಲ್ಲಿ ಸುಮಾರು 169 ರೆಸ್ಟೋರೆಂಟ್ ಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಇದೀಗ ಒಪ್ಪಂದ ಮುರಿದು ಬಿದ್ದಿರುವುದರಿಂದ ಮೆಕ್ ಡೊನಾಲ್ಡ್ಸ್ ಸಂಸ್ಥೆಯ ರೆಸ್ಟೋರೆಂಟ್ ಗಳನ್ನು ಉತ್ತರ, ಪೂರ್ವ ಭಾರತ ಹಾಗೂ ದಿಲ್ಲಿಯಲ್ಲಿ ನಡೆಸುತ್ತಿದ್ದ ಸಿಪಿಆರ್ಎಲ್, ತನಗೆ ನೋಟಿಸ್ ದೊರೆತ ಹದಿನೈದು ದಿನಗಳ ನಂತರ ಸಂಸ್ಥೆಯ ಲಾಂಛನ, ಟ್ರೇಡ್ ಮಾರ್ಕ್ ಮತ್ತು ರೆಸಿಪಿಗಳನ್ನು ಉಪಯೋಗಿಸುವ ಹಾಗಿಲ್ಲ ಎಂದು ಹೇಳಲಾಗಿದೆ.
ಪ್ರತಿಯೊಂದು ಮೆಕ್ ಡೊನಾಲ್ಡ್ಸ್ ರೆಸ್ಟೋರೆಂಟ್ ನಲ್ಲಿ ಕನಿಷ್ಠ 40ರಿಂದ 60 ಸಿಬ್ಬಂದಿಗಳಿದ್ದು, ಭಾರತದಾದ್ಯಂತ ಅದು ಸಿಪಿಆರ್ಎಲ್ ಮೂಲಕ 430 ರೆಸ್ಟೋರೆಂಟ್ ಗಳನ್ನು ಹೊಂದಿದೆ. 2013ರಲ್ಲಿ ವಿಕ್ರಮ್ ಬಕ್ಷಿ ಅವರನ್ನು ಸಿಪಿಆರ್ಎಲ್ ನ ಆಡಳಿತ ನಿರ್ದೇಶಕ ಹುದ್ದೆಯಿಂದ ಕಿತ್ತೊಗೆಯಲಾಗಿತ್ತು, ಅಂದಿನಿಂದ ಮೆಕ್ ಡೊನಾಲ್ಡ್ಸ್ ಸಂಸ್ಥೆ ವಿಕ್ರಮ್ ಬಕ್ಷಿ ಜತೆ ಕಾನೂನು ಹೋರಾಟ ನೆಸುತ್ತಾ ಬಂದಿದೆ.
ಕಳೆದ ಜುಲೈ ತಿಂಗಳಲ್ಲಿ ಬಕ್ಷಿ ಅವರನ್ನು ಕಂಪೆನಿಯ ಎಂಡಿ ಹುದ್ದೆಯಲ್ಲಿ ರಾಷ್ಟ್ರೀಯ ಕಾನೂನು ನ್ಯಾಯಾಧೀಕರಣ ಮರು ನೇಮಿಸಿತ್ತು. ಇದು ಮೆಕ್ ಡೊನಾಲ್ಡ್ಸ್ ಸಂಸ್ಥೆಯ ಈಗಿನ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಅದರಂತೆ ಮೆಕ್ ಡೊನಾಲ್ಡ್ಸ್ ರೆಸ್ಟೋರೆಂಟ್ ಭಾರತದಲ್ಲಿ ತನ್ನ 169 ಮಳಿಗೆಗಳನ್ನು ಮುಚ್ಚಲಿದ್ದು, ಇದರಿಂದ 10,000 ಕ್ಕೂ ಅಧಿಕ ಮಂದಿ ತಮ್ಮ ಉದ್ಯೋಗ ಕಳೆದುಕೊಳ್ಳಲಿದ್ದಾರೆ.