ಮುಂಬೈ: ಕೇಂದ್ರ ಸರ್ಕಾರ ಬಜೆಟ್ ಮಂಡನೆ ಸಿದ್ಧತೆ ನಡೆಸಿರುವಂತೆಯೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಚೇತೋಹಾರಿ ವಹಿವಾಟು ನಡೆಯುತ್ತಿದ್ದು, ಮಂಗಳವಾರ ಮಾರುಕಟ್ಟೆ ಆರಂಭದಲ್ಲೇ ಸೆನ್ಸೆಕ್ಸ್ 100 ಅಂಕಗಳ ಏರಿಕೆ ಕಂಡಿದೆ.
ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರ ಮತ್ತು ಅಧಿಕಾರ ಸ್ವೀಕರಿಸದ ಬಳಿಕ ಟಿಟಿಪಿ (ಟ್ರಾನ್ಸ್–ಪೆಸಿಫಿಕ್ ಸಹಭಾಗಿತ್ವ)ಯಿಂದ ಹೊರಬರುವ ನಿರ್ಧಾರದ ಹೊರತಾಗಿಯೂ ಭಾರತೀಯ ಷೇರುಮಾರುಕಟ್ಟೆ ಚೇತರಿಕೆ ಕಾಣುತ್ತಿದ್ದು, ಇಂದು ಬೆಳಗಿನ ವಹಿವಾಟಿನಲ್ಲೇ ಸೆನ್ಸೆಕ್ಸ್ 100 ಅಂಕಗಳ ಏರಿಕೆ ಕಂಡಿದೆ. ಸೆನ್ಸೆಕ್ಸ್ ಈ ವರೆಗೂ ಒಟ್ಟು 142.11 ಅಂಕಗಳ ಏರಿಕೆ ಕಾಣುವ ಮೂಲಕ, 27,259.81ಏರಿಕೆಯಾಗಿದ್ದು, ನಿಫ್ಟಿ ಕೂಡ 46 ಅಂಕಗಳ ಏರಿಕೆಯೊಂದಿಗೆ 8,437ಕ್ಕೆ ಏರಿಕೆಯಾಗಿದೆ.
ಪ್ರಮುಖವಾಗಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಮೊದಲ ದಿನವೇ ಅತೀ ದೊಡ್ಡ ವಾಣಿಜ್ಯ ಒಪ್ಪಂದ ಟಿಟಿಪಿಯಿಂದ ಅಮೆರಿಕ ಹೊರಬರುವ ಕಡತಕ್ಕೆ ಸಹಿ ಹಾಕುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಟಿಪಿಪಿ ಕಡತಕ್ಕೆ ಅವರು ಸಹಿ ಹಾಕಿದ್ದು, ಇದು ಷೇರುಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿತ್ತು.
ಇಂದಿನ ವಹಿವಾಟಿನಲ್ಲಿ ಪ್ರಮುಖವಾಗಿ ಹೆಚ್ ಸಿಎಲ್ ಟೆಕ್ನಾಲಜೀಸ್ ಸಂಸ್ಥೆಗೆ ನಷ್ಚವಾಗಿದ್ದು, ಸಂಸ್ಥೆಯ ಷೇರುಮೌಲ್ಯದಲ್ಲಿ ಶೇ.2ರಷ್ಟು ಕಡಿತವಾಗಿದೆ. ಇದಲ್ಲದೆ ಐಟಿ-ಬಿಟಿ ಕ್ಷೇತ್ರದಳ ಷೇರುಗಳ ಮೌಲ್ಯ ಕೂಡ ಶೇ.2.5ರಷ್ಟು ಕುಸಿದಿದ್ದು, ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆಯ ಷೇರುಗಳ ಮೌಲ್ಯ ಶೇ.2ರಷ್ಟು ಕುಸಿದಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೂ ಟ್ರಂಪ್ ನಡೆ ಪರಿಣಾಮ ಬೀರಿದ್ದು, ಏಷ್ಯಾದ ಪ್ರಮುಖ ದೇಶಗಳಾದ ಜಪಾನ್ ಷೇರುಮಾರುಕಟ್ಟೆಗೆ ಶೇ.1.0ರಷ್ಟು ಲಾಭವಾಗಿದ್ದು, ಚೀನಾ ಮಾರುಕಟ್ಟೆ ಶೇ0.3ರಷ್ಟು ಕುಸಿದಿದೆ. ಅಮೆರಿಕ ಷೇರುಮಾರುಕಟ್ಟೆ ಕೂಡ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದೆ.