ಒಂದು ಪುಟದ ತೆರಿಗೆ ಪಾವತಿ ಅರ್ಜಿ, ಇ-ಫಿಲ್ಲಿಂಗ್ ಗೆ ಚಾಲನೆ; ತೆರಿಗೆ ಪಾವತಿ ಇದೀಗ ಮತ್ತಷ್ಟು ಸುಲಭ!
ಮಹತ್ವದ ಬೆಳವಣಿಗೆಯಲ್ಲಿ ತೆರಿಗೆ ಪಾವತಿ ಸಂಬಂಧ ಕೇಂದ್ರ ಸರ್ಕಾರ ಶುಕ್ರವಾರ ಪ್ರಮುಖ ನಿರ್ಧಾರ ಕೈಗೊಂಡಿದ್ದು, ತೆರಿಗೆ ಪಾವತಿ ಅರ್ಜಿಯನ್ನು ಮತ್ತಷ್ಟು ಸರಳೀಕರಿಸಿ ಸೂಚನೆ ಹೊರಡಿಸಿದೆ.
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ತೆರಿಗೆ ಪಾವತಿ ಸಂಬಂಧ ಕೇಂದ್ರ ಸರ್ಕಾರ ಶುಕ್ರವಾರ ಪ್ರಮುಖ ನಿರ್ಧಾರ ಕೈಗೊಂಡಿದ್ದು, ತೆರಿಗೆ ಪಾವತಿ ಅರ್ಜಿಯನ್ನು ಮತ್ತಷ್ಟು ಸರಳೀಕರಿಸಿ ಸೂಚನೆ ಹೊರಡಿಸಿದೆ.
ತೆರಿಗೆ ಪಾವತಿ ಅರ್ಜಿ ಐಟಿಆರ್ ಅನ್ನು ಮತ್ತಷ್ಟು ಸರಳೀಕರಿಸಲಾಗಿದ್ದು, ಈ ಹಿಂದೆ ಮೂರು ಪುಟಗಳಿಗೆ ಇಳಿಕೆಯಾಗಿದ್ದ ಅರ್ಜಿಯನ್ನು ಕೇವಲ ಒಂದು ಪುಟಕ್ಕೆ ಸೀಮಿತಗೊಳಿಸಲಾಗಿದೆ. ಏಪ್ರಿಲ್ 1ರಿಂದ ಹೊಸ ಐಟಿಆರ್ ಸಹಜ ಅರ್ಜಿಗಳು ಲಭ್ಯವಿದ್ದು, ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದೆ. ಇನ್ನು ಆನ್ ಲೈನ್ನಲ್ಲಿ ಆದಾಯ ತೆರಿಗೆ ವಿವರ ಸಲ್ಲಿಕೆ ಪ್ರಕ್ರಿಯೆ ಕೂಡ ಏಪ್ರಿಲ್ 1 ಅಂದರೆ ನಾಳೆಯಿಂದಲೇ ಆರಂಭವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
2017–18ನೇ ಹಣಕಾಸು ವರ್ಷದ ಹೊಸ ಅರ್ಜಿ ‘ಸಹಜ’ ಐಟಿಆರ್1 ನಲ್ಲಿ ಈ ಮೊದಲಿದ್ದ ಅನೇಕ ಅನಗತ್ಯ ಕಾಲಂಗಳನ್ನು ಕೈಬಿಡಲಾಗಿದ್ದು, ಕೇವಲ 18 ಕಾಲಂಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ವೇತನ ಪಡೆಯುತ್ತಿರುವ ನೌಕರರು ತೆರಿಗೆ ಕಡಿತದ ಹೆಚ್ಚುವರಿ ಹಣ ಮರಳಿ ಪಡೆಯಲು, ಇಲ್ಲಿಯವರೆಗೆ ಭರ್ತಿ ಮಾಡುತ್ತಿದ್ದ VIA ಕಾಲಂ ಅನ್ನು ಹೊಸ ಅರ್ಜಿಯಲ್ಲಿ ತೆಗೆದು ಹಾಕಲಾಗಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ರ ಅಡಿ ಜೀವವಿಮೆ, ಭವಿಷ್ಯನಿಧಿ, ಗೃಹಸಾಲ, ವೈದ್ಯಕೀಯ ವಿಮೆಯಂತಹ ತೆರಿಗೆ ಕಡಿತ ಹಣ ಮರಳಿ ಪಡೆಯಲು ಇಲ್ಲವೇ ತೆರಿಗೆ ವಿನಾಯ್ತಿ ಪಡೆಯಲು ಈ ಮೊದಲಿದ್ದ 80ಸಿ ಮತ್ತು 80ಡಿ ಕಾಲಂಗಳನ್ನು ಉಳಿಸಿಕೊಳ್ಳಲಾಗಿದೆ.
ಅಂತೆಯೇ ಅರ್ಜಿ ಸಲ್ಲಿಕೆಯ ವೇಳೆ ತೆರಿಗೆದಾರರು ಆಧಾರ್ ಸಂಖ್ಯೆ ಸಲ್ಲಿಸುವುದು ಕಡ್ಡಾಯವಾಗಿದ್ದು, ಇದರೊಂದಿಗೆ ಯಾವುದೇ ತೆರಿಗೆದಾರರು ನೋಟುನಿಷೇಧದ ಬಳಿಕ ಬ್ಯಾಂಕ್ ಖಾತೆಗೆ 2 ಲಕ್ಷಕ್ಕೂ ಅಧಿಕ ಹಣ ಜಮೆ ಮಾಡಿದ್ದರೆ, ಆ ಕುರಿತ ಠೇವಣಿ ವಿವರ ಸಲ್ಲಿಸುವುದನ್ನೂ ಕೂಡ ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಇಷ್ಟು ಮಾತ್ರವಲ್ಲದೇ ಪ್ಯಾನ್ ಮತ್ತು ತೆರಿಗೆ ಪಾವತಿ ಮಾಹಿತಿ ನೀಡಬೇಕಿದ್ದು, ಮೂಲದಲ್ಲಿಯೇ ತೆರಿಗೆ ಕಡಿತ ವಿವರ (ಟಿಡಿಎಸ್) ಸ್ವಯಂ ನಮೂದಾಗಲಿದೆ. ವೈಯಕ್ತಿಕ ವಿವರಗಳ ಜೊತೆ ಜೊತೆಗೆ, ಆದಾಯ ತೆರಿಗೆ ಪಾವತಿದಾರರು ತಮ್ಮ ವೇತನ ಅಥವಾ ಪಿಂಚಣಿ, ಸ್ಥಿರಾಸ್ತಿ (ಮನೆ ಇತ್ಯಾದಿ)ಮತ್ತು ಬಡ್ಡಿಯಂತಹ ಇತರೆ ಆದಾಯದ ಮೂಲಗಳನ್ನು ಬಹಿರಂಗಪಡಿಸಬೇಕಿದೆ.
ವಾಣಿಜ್ಯ ವಹಿವಾಟಿನಿಂದ ಆದಾಯ ಹೊಂದಿರದ ಅವಿಭಜಿತ ಕುಟುಂಬ ಮತ್ತು ವ್ಯಕ್ತಿಗಳು ಐಟಿಆರ್–1 ಸಹಜ, ಐಟಿಆರ್ 2 ಮತ್ತು 2ಎ ಮತ್ತು ವಾಣಿಜ್ಯ ವಹಿವಾಟಿನಿಂದ ಆದಾಯ ಹೊಂದಿರುವವರು ಐಟಿಆರ್ 4 ಸುಗಮ ಅರ್ಜಿ ಭರ್ತಿ ಮಾಡಬೇಕಾಗುತ್ತದೆ. ವಿದೇಶ ಪ್ರಯಾಣ, ನಿಷ್ಕ್ರಿಯ ಬ್ಯಾಂಕ್ ಖಾತೆಗಳ ಬಗ್ಗೆ ಕಡ್ಡಾಯವಾಗಿ ಮಾಹಿತಿ ನೀಡುವಂತೆ ಎರಡು ವರ್ಷಗಳ ಹಿಂದೆ ವಿಧಿಸಿದ್ದ ಷರತ್ತನ್ನು ಹೊಸ ಅರ್ಜಿಯಿಂದ ಕೈಬಿಡಲಾಗಿದೆ. ಇನ್ನು ದೇಶದ 29 ಕೋಟಿ ಜನರು ಪ್ಯಾನ್ ಕಾರ್ಡ್ ಹೊಂದಿದ್ದು, ಈ ಪೈಕಿ ಕೇವಲ 6 ಕೋಟಿ ಮಂದಿ ಮಾತ್ರ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಪ್ಯಾನ್ ಕಾರ್ಡ್ ಗೆ ಆಧಾರ್ ಕಡ್ಡಾಯ ಮಾಡುವ ಮೂಲಕ ನಕಲಿ ಖಾತೆದಾರರನ್ನು ಗುರುತಿಸುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಿದೆ.