ನವದೆಹಲಿ: ಶೇ.10ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸುವುದು ದೊಡ್ಡ ಸವಾಲಾಗಿದ್ದು, ಜಗತ್ತು ಹೇಗೆ ಚಲಿಸುತ್ತಿದೆ ಎಂಬುದರ ಮೇಲೆ ಅದು ಅವಲಂಬಿತವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಹೇಳಿದ್ದಾರೆ.
ಇಂದು ಎಚ್ ಟಿ ನಾಯಕತ್ವ ಶೃಂಗದಲ್ಲಿ ಮಾತನಾಡಿದ ಅರುಣ್ ಜೇಟ್ಲಿ, ಭಾರತ ಕಳೆದ ಮೂರು ವರ್ಷಗಳಲ್ಲಿ ಶೇ.7-8ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಿದ್ದು, ಈಗ ಶೇ.10ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸುವುದು ದೊಡ್ಡ ಸವಾಲಾಗಿದೆ ಮತ್ತು ದೇಶಿಯ ಬೆಳವಣಿಗೆಗಳ ಮೇಲೆ ಅವಲಂಬಿತವಾಗಿಲ್ಲ. ಜಾಗತಿಕ ಬೆಳವಣಿಗೆ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.
ಭಾರತವು ರಚನಾತ್ಮಕವಾಗಿ ಸುಧಾರಣೆಯಾಗಿದೆ ಮತ್ತು ಸುಧಾರಣೆಗಳಲ್ಲಿ ಅಂತಿಮ ಸ್ಥಾನವಿಲ್ಲ ಎಂದ ಜೇಟ್ಲಿ, ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ವಿವಿಧ ತೆರಿಗೆ ದರಗಳೊಂದಿಗೆ ಪ್ರಾರಂಭವಾಯಿತು ಮತ್ತು ಅನೇಕ ವಸ್ತುಗಳ ಮೇಲಿನ ಜಿಎಸ್ ಟಿ ದರವನ್ನು ತರ್ಕಬದ್ಧಗೊಳಿಸಿಲಾಗಿದೆ ಎಂದು ತಿಳಿಸಿದರು.
ಜಿಎಸ್ ಟಿ ತೆರಿಗೆ ದರವನ್ನು ಮತ್ತಷ್ಟು ತರ್ಕಬದ್ಧಗೊಳಿಸುವ ಚಿಂತನೆ ಇದ್ದು, ಅದು ಆದಾಯ ಸಂಗ್ರಹಣೆಯ ಮೇಲೆ ನಿರ್ಧಾರವಾಗುತ್ತದೆ ಎಂದು ಹೇಳುವ ಮೂಲಕ ಅರುಣ್ ಜೇಟ್ಲಿ ಅವರು ಶೇ.12ರಷ್ಟು ಜಿಎಸ್ ಟಿ ತೆರಿಗೆ ದರ ಮತ್ತು ಶೇ.18ರಷ್ಟು ತೆರಿಗೆ ದರವನ್ನು ವಿಲೀನಗೊಳಿಸುವ ಸುಳಿವು ನೀಡಿದ್ದಾರೆ. ಅಲ್ಲದೆ ಅತಿ ಹೆಚ್ಚು ಶೇ.28ರಷ್ಟು ತೆರಿಗೆ ವಿಧಿಸಲಾಗುತ್ತಿರುವ ಐಷಾರಾಮಿ ಮತ್ತು ಡೆಮೆರಿಟ್ ವಸ್ತುಗಳ ನಡುವೆ ಒಂದು ಸಣ್ಣ ಅಂತರ ಇಟ್ಟುಕೊಳ್ಳುವುದಾಗಿ ಹೇಳಿದ್ದಾರೆ.