ನವದೆಹಲಿ: ನೋಟು ನಿಷೇಧ ಬಳಿಕ ಅಕ್ರಮ ಹಣ ವರ್ಗಾವಣೆ ತಡೆಯುವ ಸಂಬಂಧ 50 ಸಾವಿರಕ್ಕೂ ಅಧಿಕ ಚಿನ್ನಾಭರಣ ಖರೀದಿಗೆ ಪ್ಯಾನ್ ಮತ್ತು ಕೆವೈಸಿ (ನಿಮ್ಮ ಗ್ರಾಹಕರ ತಿಳಿಯಿರಿ) ಕಡ್ಡಾಯ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಆ ಕ್ರಮಕ್ಕೆ ತಾತ್ಕಾಲಿಕ ತಡೆ ನೀಡಿದೆ.
ನಿನ್ನೆ ನಡೆದ ಜಿಎಸ್ ಟಿ ಸಮಿತಿ ಸಭೆಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಈ ಮಹತ್ವದ ಕ್ರಮ ಕೈಗೊಂಡಿದ್ದು, 50 ಸಾವಿರಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳಿಗೆ ಪ್ಯಾನ್ ಕಾರ್ಡ್ ಮತ್ತು ಕೆವೈಸಿ ಕಡ್ಡಾಯವಿಲ್ಲ ಎಂದು ಹೇಳಿದೆ. ಅಷ್ಟು ಮಾತ್ರವಲ್ಲದೇ ಈ ಹಿಂದೆ 50 ಸಾವಿರಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಖರೀದಿಸುವ ಗ್ರಾಹಕರ ಮಾಹಿತಿ ಕೂಡ ಸರ್ಕಾರಕ್ಕೆ ನೀಡಬೇಕಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಈ ಹಿಂದೆ ನೋಟು ನಿಷೇಧದ ಬಳಿಕ ಅಕ್ರಮ ಹಣ ಮತ್ತು ಕಪ್ಪು ಹಣ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಕ್ರಮ ಹಣ ವರ್ಗಾವಣೆ ನಿಗ್ರಹ ಕಾಯ್ದೆಯಡಿಯಲ್ಲಿ 50 ಸಾವಿರಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳಿಗೆ ಪ್ಯಾನ್ ಕಾರ್ಡ್ ಮತ್ತು ಕೆವೈಸಿ ಕಡ್ಡಾಯಗೊಳಿಸಿತ್ತು. ಅಲ್ಲದೆ ಈ ರೀತಿ 50 ಸಾವಿರ ರೂಗಳಿಗೂ ಅಧಿಕ ಪ್ರಮಾಣದ ಆಭರಣ ಖರೀದಿಸುವ ಗ್ರಾಹಕರ ಮಾಹಿತಿಯನ್ನು ಕಡ್ಡಾಯವಾಗಿ ಸಂಗ್ರಹಿಸುವಂತೆ ನಿರ್ದೇಶನ ನೀಡಲಾಗಿತ್ತು. ಸರ್ಕಾರದ ಈ ಕ್ರಮಗಳಿಂದಾಗಿ ಗ್ರಾಹಕರಿಗೆ ಮಾತ್ರವಲ್ಲದೇ ಚಿನ್ನದ ಆಭರಣ ಮಾರಾಟಗಾರರಿಗೂ ತೊಂದರೆಯಾಗುತ್ತಿತ್ತು. ಅಂತೆಯೇ ಜಿಎಸ್ ಟಿ ಜಾರಿ ಬಳಿಕ ಆಭರಣಗಳ ಮಾರಾಟ ಪ್ರಮಾಣದಲ್ಲಿ ಶೇ.50 ರಿಂದ 60ರಷ್ಟು ಗಣನೀಯ ಇಳಿಕೆಯಾಗಿತ್ತು ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics