ಆಗಸ್ಟ್, ಸೆಪ್ಟೆಂಬರ್ ತಿಂಗಳ ಜಿಎಸ್ ಟಿ ವಿಳಂಬ ಪಾವತಿ ದಂಡ ತೆರವು: ವಿತ್ತ ಸಚಿವ ಅರುಣ್ ಜೇಟ್ಲಿ
ತಡವಾಗಿ ಜಿಎಸ್ ಟಿ ತೆರಿಗೆ ಪಾವತಿ ಮಾಡಿ ದಂಡದ ಭೀತಿ ಎದುರಿಸುತ್ತಿದ್ದ ತೆರಿಗೆದಾರರಿಗೆ ಕೇಂದ್ರ ಸರ್ಕಾರ ರಿಲೀಫ್ ನೀಡಿದ್ದು, ಜಿಎಸ್ ಟಿ ತೆರಿಗೆ ವಿಳಂಬ ಪಾವತಿ ಮೇಲಿನ ದಂಡವನ್ನು ತೆರವುಗೊಳಿಸಿದೆ.
ನವದೆಹಲಿ: ತಡವಾಗಿ ಜಿಎಸ್ ಟಿ ತೆರಿಗೆ ಪಾವತಿ ಮಾಡಿ ದಂಡದ ಭೀತಿ ಎದುರಿಸುತ್ತಿದ್ದ ತೆರಿಗೆದಾರರಿಗೆ ಕೇಂದ್ರ ಸರ್ಕಾರ ರಿಲೀಫ್ ನೀಡಿದ್ದು, ಜಿಎಸ್ ಟಿ ತೆರಿಗೆ ವಿಳಂಬ ಪಾವತಿ ಮೇಲಿನ ದಂಡವನ್ನು ತೆರವುಗೊಳಿಸಿದೆ.
ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಜಿಎಸ್ ಟಿ ತೆರಿಗೆ ವಿಳಂಬ ಪಾವತಿ ಮೇಲಿನ ದಂಡವನ್ನು ಕೇಂದ್ರ ಸರ್ಕಾರ ತೆರವುಗೊಳಿಸಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಈ ಬಗ್ಗೆ ಇಂದು ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಜೇಟ್ಲಿ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನ ಜಿಎಸ್ ಟಿ ತೆರಿಗೆ ವಿಳಂಬ ಪಾವತಿ ಮೇಲಿನ ದಂಡವನ್ನು ಸರ್ಕಾರ ತೆರವುಗೊಳಿಸಿದೆ. ಅಲ್ಲದೆ ಈಗಾಗಲೇ ವಿಳಂಬ ಪಾವತಿ ಮಾಡಿ ದಂಡ ತೆತ್ತಿರುವ ತೆರಿಗೆದಾರರಿಗೆ ದಂಡದ ಹಣ ವಾಪಸ್ ನೀಡಲಾಗುತ್ತದೆ. ತೆರಿಗೆದಾರರ ಖಾತೆಗಳಿಗೆ ಶೀಘ್ರವೇ ದಂಡದ ಹಣವನ್ನು ವಾಪಸ್ ಜಮೆ ಮಾಡಲಾಗುತ್ತದೆ ಎಂದು ಜೇಟ್ಲಿ ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆ ಕೇಂದ್ರ ವಿತ್ತ ಇಲಾಖೆ ಜುಲೈ ತಿಂಗಳ ಜಿಎಸ್ ಟಿ ತೆರಿಗೆ ವಿಳಂಬ ಪಾವತಿ ಮೇಲಿನ ದಂಡವನ್ನು ಕೂಡ ತೆರವುಗೊಳಿಸಿತ್ತು. ಜಿಎಸ್ ಟಿ ಜಾರಿಯಲ್ಲಿನ ತಾಂತ್ರಿಕ ದೋಷಗಳ ಸರಿಪಡಿಸುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಅನುಸರಿಸುತ್ತಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರ 3ಬಿ ಜಿಎಸ್ ಟಿ ಪಾವತಿ ಮೇಲಿನ ದಂಡವನ್ನು ತೆರವುಗೊಳಿಸಬೇಕು ಎಂದು ಹಲವು ಉಧ್ಯಮಿಗಳು ಆಗ್ರಹಿಸಿದ್ದರು.
ಸರ್ಕಾರಿ ದತ್ತಾಂಶಗಳ ಅನ್ವಯ ಜುಲೈ ತಿಂಗಳಲ್ಲಿ 55.87 ಲಕ್ಷ ಜಿಎಸ್ ಟಿಆರ್-3ಬಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಆಗಸ್ಟ್ ನಲ್ಲಿ 51.37 ಲಕ್ಷ ಅರ್ಜಿಗಳು ಮತ್ತು ಸೆಪ್ಟೆಂಬರ್ ನಲ್ಲಿ 42 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು.