ಮುಂಬೈಯ ಬ್ರಾಡಿ ರಸ್ತೆಯಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆ
ನವದೆಹಲಿ: ಜ್ಯುವೆಲ್ಲರಿ ಮಾಲೀಕ ನೀರವ್ ಮೋದಿ 11,300 ಕೋಟಿ ರೂಪಾಯಿ ಹಣ ವಂಚಿಸಿದ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈಯ ಬ್ರಾಡಿ ರಸ್ತೆಯಲ್ಲಿರುವ ಶಾಖೆಗೆ ಸಿಬಿಐ ಸೋಮವಾರ ಬೀಗ ಹಾಕಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿನ ಇಬ್ಬರು ನೌಕರರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಇದು ದೇಶದ ಬ್ಯಾಂಕಿಂಗ್ ವಲಯದಲ್ಲಿ ಆದ ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣವಾಗಿದೆ.
ನೀರವ್ ಮೋದಿಯವರ ಫೈರ್ ಸ್ಟಾರ್ ಡೈಮಂಡ್ ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ವಿಪುಲ್ ಅಂಬಾನಿಯವರನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ.
ನೀರವ್ ಮೋದಿ ಮತ್ತು ಅವರ ಸಂಬಂಧಿ ವ್ಯಾಪಾರದ ಸಹಭಾಗಿ ಮೆಹುಲ್ ಚೊಕ್ಸಿ ಅವರು ಒಳಗೊಂಡಿರುವ ಪಿಎನ್ ಬಿ ಹಗರಣ ನಡೆದ ಬ್ರಾಡಿ ರಸ್ತೆ ಶಾಖೆಯಲ್ಲಿ ಸಿಬಿಐ ತೀವ್ರ ವಿಚಾರಣೆಯನ್ನು ಆರಂಭಿಸಿದೆ.
ಸಿಬಿಐ, ಇಬ್ಬರು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಅಧಿಕಾರಿಗಳನ್ನು ಮತ್ತು ನೀರವ್ ಮೋದಿ ಕಂಪೆನಿಯ ಅಧಿಕೃತ ಸಹಿ ಅಧಿಕಾರಿಯನ್ನು ತೀವ್ರ ವಿಚಾರಣೆಗೊಳಪಡಿಸಿದೆ. ಪ್ರಧಾನ ವ್ಯವಸ್ಥಾಪಕ ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತೆ ಐವರು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿರುವ ಸಿಬಿಐ ಈ ಮೂಲಕ ಒಟ್ಟು 11 ಮಂದಿಯನ್ನು ವಿಚಾರಣೆ ನಡೆಸುತ್ತಿದೆ.