ವಾಣಿಜ್ಯ

ಸದ್ದಿಲ್ಲದೇ ಗಗನಕ್ಕೇರಿದ ಡೀಸೆಲ್ ದರ, 3 ವರ್ಷಗಳಲ್ಲೇ ಪೆಟ್ರೋಲ್ ದರ ಗರಿಷ್ಠ

Srinivasamurthy VN
ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರಗಳ ಮೇಲಿನ ನಿಯಂತ್ರಣವನ್ನು ಕಡಿತಗೊಳಿಸಿ ನಿತ್ಯ ದರ ಪರಿಷ್ಕರಣೆಗೆ ಅವಕಾಶ ಮಾಡಿಕೊಟ್ಟಿರುವಂತೆಯೇ ಇತ್ತ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸದ್ದಿಲ್ಲದೇ ಗಗನಕ್ಕೇರಿವೆ.
ಮೂಲಗಳ ಪ್ರಕಾರ ಡೀಸೆಲ್‌ ದರ ಪ್ರತಿ ಲೀಟರ್‌ಗೆ ದಾಖಲೆಯ 61.74 ರೂ.ಗೆ ಹಾಗೂ ಪೆಟ್ರೋಲ್‌ ದರ 71 ರೂ.ಗೆ ಏರಿಕೆಯಾಗಿದೆ. ಪೆಟ್ರೋಲ್‌ ದರ ರಾಜಧಾನಿ ದೆಹಲಿಯಲ್ಲಿ ಲೀಟರ್‌ಗೆ 71.18 ರೂ.ಗೆ ಏರಿಕೆಯಾಗಿದ್ದು,  2014ರ ಆಗಸ್ಟ್‌ ನಂತರ ಇದೇ ಮೊದಲ ಬಾರಿಗೆ ಪೆಟ್ರೋಲ್ ದರ ಗರಿಷ್ಟ ಮಟ್ಟಕ್ಕೇರಿದೆ.  ಇನ್ನು ಡೀಸೆಲ್‌ ದರ ದೆಹಲಿಯಲ್ಲಿ ಲೀಟರ್‌ ಗೆ 61.74 ರೂ ಗಳಾಗಿದ್ದು, ಹಾಗೆಯೇ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 65.74 ರೂ.ಗಳಿಗೆ  ಏರಿಕೆಯಾಗಿದೆ. ಇನ್ನು ದರ ಏರಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರಗಳು ಏರುತ್ತಿರುವುದೇ ಕಾರಣ ಎಂದು ಹೇಳಲಾಗುತ್ತಿದ್ದು, ಇದಲ್ಲದೇ ಹೆಚ್ಚಿನ ಪ್ರಮಾಣಜ ವ್ಯಾಟ್ ಕೂಡ ದರ ಏರಿಕೆಗೆ ಮತ್ತೊಂದು ಕಾರಣ ಎನ್ನಲಾಗಿದೆ.
ಡಿಸೆಂಬರ್‌ 12ರಿಂದ ಡೀಸೆಲ್‌, ಪೆಟ್ರೋಲ್‌ ದರಗಳು ನಿಯಮಿತವಾಗಿ ಏರಿಕೆಯಾಗುತ್ತಿದ್ದು, ದೆಹಲಿಯಲ್ಲಿ ಕಳೆದೊಂದು ತಿಂಗಳಲ್ಲಿ ಡೀಸೆಲ್‌ ದರದಲ್ಲಿ ಬರೊಬ್ಬರಿ 3.4 ರೂ. ಗಳಷ್ಟು ದರ ಏರಿಕೆಯಾಗಿದೆ. ಇದೇ ಅವಧಿಯಲ್ಲಿ  ಪೆಟ್ರೋಲ್‌ ಬೆಲೆ ಕೂಡ 2.09 ರೂ.ಗಳಷ್ಟು ಹೆಚ್ಚಳವಾಗಿದೆ. 
ಇನ್ನು ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿದರೆ ಜನ ಸಾಮಾನ್ಯರ ಮೇಲಿನ ಹೊರೆಯನ್ನು ತಕ್ಕಮಟ್ಟಿಗೆ ಇಳಿಸಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2017ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ  ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಪರಿಣಾಮ ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ 56.89 ರೂ. ಮತ್ತು 68.38 ರೂ.ಗೆ ಇಳಿದಿತ್ತು. 
ಇನ್ನು ಕಳೆದ ವಾರ ತೈಲ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಅಬಕಾರಿ ಸುಂಕ ಕಡಿತದ ಬಗ್ಗೆ ಮಾತನಾಡಿ, ಈ ಹಿಂದೆಯೇ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಹೀಗಾಗಿ ಪ್ರಸ್ತುತ ರಾಜ್ಯ ಸರ್ಕಾರಗಳು  ವ್ಯಾಟ್‌ ಅನ್ನು ಕಡಿಮೆ ಮಾಡಲಿ ಎಂದು ಪ್ರತಿಕ್ರಿಯೆ ನೀಡಿದ್ದರು. 
SCROLL FOR NEXT