ನವದೆಹಲಿ: ರಾಜಧಾನಿ ದೆಹಲಿಯ ಹೊರವಲಯ ನೊಯ್ಡಾದಲ್ಲಿ ತಲೆ ಎತ್ತಿರುವ ವಿಶ್ವದ ಅತೀ ದೊಡ್ಡ ಸ್ಮಾರ್ಟ್ ಫೋನ್ ತಯಾರಿಕಾ ಘಟಕ ಸ್ಯಾಮ್ ಸಂಗ್ ಘಟಕ ಇದೀಗ ಹಲವು ಅಂಶಗಳಿಗಾಗಿ ವಿಶ್ವದ ಗಮನ ಸೆಳೆಯುತ್ತಿದೆ.
ದಕ್ಷಿಣ ಕೊರಿಯಾ ಮತ್ತು ಭಾರತ ಪ್ರಧಾನಿಗಳು ಜಂಟಿಯಾಗಿ ಈ ಬೃಹತ್ ಸ್ಮಾರ್ಟ್ ಫೋನ್ ತಯಾರಿಕಾ ಘಟಕವನ್ನು ಉದ್ಘಾಟನೆ ಮಾಡಿದ್ದು, ಈ ಬೃಹತ್ ಸ್ಮಾರ್ಟ್ ಫೋನ್ ತಯಾರಿಕಾ ಘಟಕದ ಕೆಲ ಮಹತ್ವದ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.
1997ರಲ್ಲಿ ಸ್ಯಾಮ್ ಸಂಗ್ ಸಂಸ್ಥೆ ತನ್ನ ಟಿವಿ ಸೆಟ್ ಗಳ ನಿರ್ಮಾಣದೊಂದಿಗೆ ಭಾರತಕ್ಕೆ ಕಾಲಿಟ್ಟಿತ್ತು.
ನೋಯ್ಡಾದ ಸೆಕ್ಟರ್ 81ನಲ್ಲಿ ತಲೆ ಎತ್ತಿರುವ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ತಯಾರಿಕಾ ಘಟಕ ಬರೊಬ್ಬರಿ 35 ಎಕರೆ ಭೂಮಿಯಲ್ಲಿ ತಲೆ ಎತ್ತಿದೆ.
ಈಗಾಗಲೇ ಇದ್ದ ನೋಯ್ಡಾ ಸ್ಯಾಮ್ ಸಂಗ್ ಘಟಕವನ್ನು ವಿಸ್ತರಣೆ ಮಾಡಲು ಕಳೆದ ವರ್ಷ ಜೂನ್ ತಿಂಗಳಲ್ಲಿ ಸಂಸ್ಥೆ ನಿರ್ಧರಿಸಿತ್ತು. ಇದಕ್ಕಾಗಿ ಸುಮಾರು 4,915 ಕೋಟಿ ರೂಗಳ ಬಂಡವಾಳ ಹೂಡಿಕೆ ಮಾಡಿ ತನ್ನ ಉತ್ಪಾದನೆಯನ್ನು ದ್ವಿಗುಣಗೊಳಿಸಲು ನಿರ್ಧರಿಸಿತ್ತು.
ಈ ಘಟಕದ ವಿಸ್ತರಣೆ ಮೂಲಕ ಭಾರತ ಬೃಹತ್ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತನ್ನ ಪ್ರಭುತ್ವ ಮುಂದುವರೆಸಲು ಸ್ಯಾಮ್ ಸಂಗ್ ಸಂಸ್ಥೆ ಕೈ ಹಾಕಿದ್ದು, ಇದಕ್ಕಾಗಿ ಸುಮಾರು 4 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದೆ. ಆ ಮೂಲಕ ಪ್ರಸ್ತುತ ಭಾರತದಲ್ಲಿ ಇರುವ ತನ್ನ ಉತ್ಪಾದನೆಯನ್ನು 67 ಮಿಲಿಯನ್ ನಿಂದ 120 ಮಿಲಿಯನ್ ಗೆ ಏರಿಕೆ ಮಾಡಲು ಬೃಹತ್ ಹೆಜ್ಜೆಯನ್ನಿಟ್ಟಿದೆ.
ಇದೇ ಘಟಕದಲ್ಲಿ ಸ್ಮಾರ್ಟ್ ಫೋನ್ ಮಾತ್ರವಲ್ಲದೇ ಸ್ಯಾಮ್ ಸಂಗ್ ಸಂಸ್ಥೆ ತನ್ನ ಇತರೆ ಎಲೆಕ್ಟ್ರಾನಿಕ್ ವಸ್ತುಗಳಾದ ಟಿವಿ, ಫ್ರಿಡ್ಜ್ ಮತ್ತು ಏರ್ ಕಂಡೀಷನರ್ ಗಳ ತಯಾರಿಕಾ ಪ್ರಮಾಣವನ್ನು ಕೂಡ ಹೆಚ್ಚು ಮಾಡುವ ಕುರಿತು ಸ್ಯಾಮ್ ಸಂಗ್ ಸಂಸ್ಥೆ ನಿರ್ಧಾರ ಕೈಗೊಂಡಿದೆ.
ಸ್ಯಾಮ್ ಸಂಗ್ ಸಂಸ್ಥೆ ಭಾರತದಲ್ಲಿರುವ ತನ್ನ ಒಟ್ಟಾರೆ ತಯಾರಿಕಾ ಘಟಕಗಳಲ್ಲಿ ಶೇ.10ರಷ್ಟು ಉತ್ಪಾದನೆ ಮಾಡುತ್ತಿದ್ದು, ಪ್ರಮಾಣವನ್ನು ಮುಂದಿನ 3 ವರ್ಷಗಳ ಅವಧಿಯಲ್ಲಿ ಶೇ.50ಕ್ಕೆ ಏರಿಕೆ ಮಾಡಲು ನಿರ್ಧರಿಸಿದೆ.
ಇನ್ನು ಈ ಬೃಹತ್ ಘಟಕ ಸುಮಾರು 70 ಸಾವಿರ ಮಂದಿ ಉದ್ಯೋಗಿಗಳನ್ನು ಹೊಂದಲಿದೆ.
ಭಾರತದಲ್ಲಿ ಸ್ಯಾಮ್ ಸಂಗ್
1995ರಲ್ಲಿ ನೊಯಿಡಾದಲ್ಲಿ ಸ್ಯಾಮ್‌ಸಂಗ್ ಘಟಕಕ್ಕೆ ಅಡಿಗಲ್ಲು ಹಾಕಲಾಯಿತು. 1997ರಲ್ಲಿ ವಿವಿಧ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆ ಆರಂಭವಾಯಿತು. ಈ ಘಟಕದಿಂದ ಮೊದಲ ಟೆಲಿವಿಷನ್ 2003ರಲ್ಲಿ ಮಾರುಕಟ್ಟೆಗೆ ಬಂತು. 2005ರ ವೇಳೆಗೆ ಸ್ಯಾಮ್‌ಸಂಗ್ ಭಾರತದಲ್ಲಿ ಟಿವಿ ಮಾರುಕಟ್ಟೆಯ ಮೇಲೆ ಅಧಿಪತ್ಯ ಸಾಧಿಸಿತು. 2007ರಲ್ಲಿ ನೊಯಿಡಾ ಕಾರ್ಖಾನೆಯು ಮೊಬೈಲ್ ಫೋನ್ ಉತ್ಪಾದನೆ ಆರಂಭಿಸಿತು. 2012ರ ವೇಳೆಗೆ ಸ್ಯಾಮ್‌ಸಂಗ್ ಭಾರತದ ಮೊಬೈಲ್ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿತು.
2016-17ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಸ್ಯಾಮ್ ಸಂಗ್ ಇಂಡಿಯಾದ ಮೊಬೈಲ್ ವಹಿವಾಟು ಶೇ.27ರಷ್ಟು ಹೆಚ್ಚಾಗಿದೆ. ಸ್ಯಾಮ್ ಸಂಗ್ ಕಂಪನಿಯ ಭಾರತದ ವಹಿವಾಟಿನ ಒಟ್ಟು ಮೊತ್ತ ರೂ.50 ಸಾವಿರ ಕೋಟಿ. ಈ ಪೈಕಿ ಮೊಬೈಲ್ ವ್ಯಾಪಾರದ ಪಾಲು ರೂ 34 ಸಾವಿರ ಕೋಟಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics