ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ಮುಸುಕಿನ ಗುದ್ದಾಟಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಕೇಂದ್ರಕ್ಕೆ ಶೇ.50ರಷ್ಟು ಲಾಭಾಂಶ ವರ್ಗಾವಣೆಯೂ ಸೇರಿದಂತೆ ಸರ್ಕಾರದ ಬಹುತೇಕ ಬೇಡಿಕೆಗಳಿಗೆ ಆರ್ ಬಿಐ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ.
ನಿನ್ನೆ ಮುಂಬೈನಲ್ಲಿ ನಡೆದ ಆರ್ಬಿಐ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದ್ದು, ಸರ್ಕಾರದ ಬಹುತೇಕ ಬೇಡಿಕೆಗೆ ಸಭೆ ಸಮ್ಮತಿ ಸೂಚಿಸಿದೆ. ಆ ಮೂಲಕ ಸುಮಾರು 3 ತಿಂಗಳಿನಿಂದ ನಡೆಯುತ್ತಿದ್ದ ಶೀತಲಸಮರಕ್ಕೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.
ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆ (ಎಂಎಸ್ಎಂಇ) ವಲಯದ ಸಾಲ ಮರುಸಂಯೋಜನೆ, ಆರ್ ಬಿಐನಲ್ಲಿರುವ ಹೆಚ್ಚುವರಿ ಹಣದ ವರ್ಗಾವಣೆ ಕುರಿತು ನಿಯಮ ರಚನೆಗೆ ಸಮಿತಿ, ಮಾರುಕಟ್ಟೆಗೆ ಹೆಚ್ಚುವರಿ ಹಣ ಪೂರೈಕೆ ಸೇರಿ ಹಲವು ಪ್ರಮುಖ ನಿರ್ಧಾರಗಳು ಹೊರಬಿದ್ದಿವೆ. ಸುಧೀರ್ಘ 9 ಗಂಟೆಗಳ ಕಾಲ ಈ ಮಹತ್ವದ ಸಭೆ ನಡೆದಿದ್ದು, ಡಿ.14ರಂದು ನಡೆಯಲಿರುವ ಮುಂದಿನ ಸಭೆಯೊಳಗೆ ವಿವಾದಿತ ವಿಚಾರಗಳಿಗೆ ತಾರ್ಕಿಕ ಅಂತ್ಯ ಹಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅಂತೆಯೇ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ವದಂತಿಗೂ ತೆರೆ ಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ಹಿನ್ನೆಲೆಯಲ್ಲಿ ಪಟೇಲ್ ತಮ್ಮ ನಿಲುವನ್ನು ಕೊಂಚ ಸಡಿಲಿಸಿದ್ದಾರೆ ಎನ್ನಲಾಗಿದೆ.
ಹೆಚ್ಚುವರಿ ಹಣ ವರ್ಗಾವಣೆಗೆ ಸಮಿತಿ
ಆರ್ ಬಿಐನಲ್ಲಿರುವ ಹೆಚ್ಚುವರಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುವ ಕುರಿತು ಮಾರ್ಗಸೂಚಿ ರೂಪಿಸಲು ತಜ್ಞರ ಸಮಿತಿ ರಚನೆಗೆ ಆಡಳಿತ ಮಂಡಳಿ ನಿರ್ಧರಿಸಿದ್ದು, ಈ ಸಮಿತಿಯ ವರದಿ ಆಧರಿಸಿ ಹಣ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ. ಸದ್ಯಕ್ಕೆ ಆರ್ ಬಿಐನಲ್ಲಿ 9.6 ಲಕ್ಷ ಕೋಟಿ ರೂ. ಹೆಚ್ಚುವರಿ ಹಣವಿದ್ದು, ಇದು ಆಸ್ತಿಯ ಶೇ.28 ಭಾಗವಾಗಿದೆ. ಆದರೆ ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ಶೇ.15 ಇದ್ದರೆ ಸಾಕು ಎನ್ನುವುದು ಸರ್ಕಾರದ ವಾದ. ಹೀಗಾಗಿ 3.6 ಲಕ್ಷ ಕೋಟಿ ರೂ. ಹೆಚ್ಚುವರಿ ಹಣವನ್ನು ನೀಡುವಂತೆ ಸರ್ಕಾರ ಕೇಳಿತ್ತು. ಇದಕ್ಕೆ ಆರ್ ಬಿಐ ವಿರೋಧ ವ್ಯಕ್ತಪಡಿಸಿತ್ತು. ಇದೇ ವಿಚಾರ ಸರ್ಕಾರ ಮತ್ತು ಆರ್ ಬಿಐ ತಿಕ್ಕಾಟಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
-ರೆಪೋ ದರದಲ್ಲಿ ಯಾವುದೇ ಬದಲಾವಣೆಯಿಲ್ಲ, ಶೇ.6.5 ಮುಂದುವರಿಕೆ.
-ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳ ಸಾಲ ನೀಡಿಕೆ ನಿಯಮ ಸಡಿಲಿಸುವ ಕುರಿತು ಆರ್ಥಿಕ ಮೇಲುಸ್ತುವಾರಿ ಮಂಡಳಿ ಪರಿಶೀಲನೆ ನಡೆಸಲಿದೆ.
-ಬ್ಯಾಂಕೇತರ ಹಣಕಾಸು ವಲಯಕ್ಕೆ ಹೆಚ್ಚುವರಿ ಹಣ ಪೂರೈಕೆಗೆ ಸಮ್ಮತಿ
-ಸರ್ಕಾರಿ ಬಾಂಡ್ಗಳ ಹರಾಜಿನ ಮೂಲಕ 8 ಸಾವಿರ ಕೋಟಿ ರೂ. ಸಂಗ್ರಹಕ್ಕೆ ಸಮ್ಮತಿ.
-ಕೇಂದ್ರ ಸರ್ಕಾರಕ್ಕೆ ಈ ಬಾರಿಯು 50 ಸಾವಿರ ಕೋಟಿ ರೂ. ಲಾಭಾಂಶ ವರ್ಗಾವಣೆ
-ಡಿ.14ಕ್ಕೆ ನಡೆಯಲಿರುವ ಮುಂದಿನ ಆಡಳಿತ ಸಭೆಯಲ್ಲಿ ಎಲ್ಲ ವಿವಾದಗಳಿಗೆ ತಾರ್ಕಿಕ ಅಂತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics