ವಾಣಿಜ್ಯ

2019 ಜನವರಿಯಲ್ಲಿ 1 ಲಕ್ಷ ಕೋಟಿ ರೂ. ದಾಟಿದ ಜಿಎಸ್ ಟಿ ಆದಾಯ ಸಂಗ್ರಹ

Nagaraja AB

ನವದೆಹಲಿ: ದೇಶದಲ್ಲಿ 2019ರ ಜನವರಿಯವರೆಗೆ 1.2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ  ಜಿಎಸ್ ಟಿ ಆದಾಯ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಈ ಕುರಿತು ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, 2018ರ ಜನವರಿಯಲ್ಲಿ 89 ಸಾವಿರ ಕೋಟಿ ರೂ. ಜಿಎಸ್  ಟಿ ಆದಾಯ ಸಂಗ್ರಹವಾಗಿತ್ತು. ಈ ಸಾಲಿನಲ್ಲಿ ಅದು ಶೇ.14ರಷ್ಟು ಏರಿಕೆ ಕಂಡಿದೆ ಎಂದು ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರ ಹಲವು ತೆರಿಗೆಗಳನ್ನು ಕಡಿತಗೊಳಿಸಿದ್ದರೂ, ಜಿಎಸ್ ಟಿ ಆದಾಯದಲ್ಲಿ ಹೆಚ್ಚಳ ಕಂಡುಬಂದಿದೆ. ಕಳೆದ ಮೂರು ತಿಂಗಳ ಸಂಗ್ರಹ, ಹಿಂದಿನ ವರ್ಷಕ್ಕಿಂತ ಶೇ.14ರಷ್ಟು ಹೆಚ್ಚಿದೆ. ಇದು ಕೇಂದ್ರದ 17 ಸಾವಿರ ಕೋಟಿ ರೂ., ರಾಜ್ಯದ 24 ಸಾವಿರ ಕೋಟಿ ರೂ. ಹಾಗೂ  ಸಮಗ್ರ ಜಿಎಸ್‍ಟಿ 51 ಸಾವಿರ ಕೋಟಿ ರೂ. (ಆಮದು ವಸ್ತುಗಳಿಂದ ಸಂಗ್ರಹಿಸಿದ 24 ಸಾವಿರ ಕೋಟಿ ರೂ. ಸೇರಿ ) ಹಾಗೂ 8 ಸಾವಿರ ಕೋಟಿ ರೂ. ಸೆಸ್‍ (ಆಮದಿನಿಂದ ಸಂಗ್ರಹಿಸಿದ 902 ಕೋಟಿ ರೂ. ಸೇರಿ) ಅನ್ನು ಒಳಗೊಂಡಿದೆ ಎಂದು ಸಚಿವಾಲಯ ತಿಳಿಸಿದೆ.

2018-19ನೇ ಸಾಲಿನಲ್ಲಿ ಮೂರನೇ ಬಾರಿಗೆ ಜಿಎಸ್ ಟಿ ಆದಾಯ ಸಂಗ್ರಹ 1 ಲಕ್ಷ ಕೋಟಿ ರೂ.ಗಳನ್ನು ದಾಟಿದೆ.  ಜಿಎಸ್ ಟಿ ಮರುಪಾವತಿಗೆ 2019ರ ಜನವರಿ 31ರವರೆಗೆ ಒಟ್ಟು 73.3 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ.

2018 ರ ಅಕ್ಟೋಬರ್ ನಲ್ಲಿ 1 ಲಕ್ಷ ಕೋಟಿ ರೂ. ಹಾಗೂ ನವೆಂಬರ್ ನಲ್ಲಿ  97 ಸಾವಿರ ಕೋಟಿ ರೂ. ಸಂಗ್ರಹವಾಗಿದ್ದು ಜಿಎಸ್‍ ಟಿ ಆದಾಯ ಡಿಸೆಂಬರ್ ನಲ್ಲಿ 94 ಸಾವಿರ ಕೋಟಿ ರೂ. ಗಳಿಗೆ ಇಳಿದಿತ್ತು. 2019ರ ಜನವರಿಯಲ್ಲಿ ಅದು ಮತ್ತೆ ಏರಿಕೆ ಕಂಡಿದೆ ಎಂದು ಸಚಿವಾಲಯ ಪ್ರಕಟಿಸಿದೆ.

SCROLL FOR NEXT