ವಾಣಿಜ್ಯ

ಸ್ಟಾರ್ಟ್ ಅಪ್ ಆರಂಭಿಸುವ ಆಸೆಯಿದೆಯೇ, ನಿಮಗೆ ಆಸರೆಯಾಗಿ ನಿಲ್ಲುತ್ತಾರೆ ರತನ್ ಟಾಟಾ 

Sumana Upadhyaya

ನಿಮ್ಮಲ್ಲಿ ಉತ್ತಮ ಸ್ಟಾರ್ಟ್ ಅಪ್ ಉದ್ಯಮ ಆರಂಭಿಸುವ ಆಲೋಚನೆಯಿದೆಯೇ? ಆದರೆ ನಿಮ್ಮಲ್ಲಿ ಬಂಡವಾಳ ಕೊರತೆಯಿದೆಯೇ? ಚಿಂತೆ ಬೇಡ, ನಿಮ್ಮ ಆಸೆಗೆ ಆಸರೆಯಾಗಲಿದ್ದಾರೆ ಖ್ಯಾತ ಉದ್ಯಮಿ, ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ರತನ್ ಟಾಟಾ. ತಮ್ಮ ಷರತ್ತುಗಳು ಈಡೇರಿದರೆ ಸ್ಟಾರ್ಟ್ ಅಪ್ ಉದ್ಯಮದಲ್ಲಿ ಹೆಚ್ಚಿನ ಹೂಡಿಕೆ ಮಾಡುವುದಾಗಿ ರತನ್ ಟಾಟಾ ಹೇಳಿದ್ದಾರೆ.


ಸ್ಟಾರ್ಟ್ ಅಪ್ ಉದ್ಯಮ ಆರಂಭಿಸುವವರಲ್ಲಿ ಇರಬೇಕಾದ ಅವಶ್ಯಕ ಗುಣಗಳು ಯಾವ್ಯಾವುದು ಎಂಬುದನ್ನು ರತನ್ ಟಾಟಾ ಹೇಳಿದ್ದಾರೆ. ಇದುವರೆಗೆ ಯಾರೂ ಅನ್ವೇಷಿಸದಿರುವ ಹೊಸ ಕ್ಷೇತ್ರವನ್ನು ಅಥವಾ ಉದ್ಯಮವನ್ನು ಸ್ಟಾರ್ಟ್ ಅಪ್ ಉದ್ದಿಮೆದಾರರು ಆರಿಸಿಕೊಳ್ಳಬೇಕು. ಎಲ್ಲರಿಗಿಂತ ಭಿನ್ನವಾದುದನ್ನು ಮಾಡಲು ಯುವಕ ಅಥವಾ ಯುವತಿಯರು ಅವಕಾಶಗಳನ್ನು ಹುಡುಕಬೇಕು ಎಂದು ಸಮಾರಂಭವೊಂದರಲ್ಲಿ ರತನ್ ಟಾಟಾ ಹೇಳಿದ್ದಾರೆ.


ಸ್ಟಾರ್ಟ್ ಅಪ್ ಉದ್ದಿಮೆ ಮಾಡಬೇಕೆಂದು ತಮ್ಮಲ್ಲಿಗೆ ಬರುವವರು ಆ ಉದ್ಯಮದ ಬಗ್ಗೆ ಎಷ್ಟು ಗಂಭೀರವಾಗಿದ್ದಾರೆ ಮತ್ತು ಉದ್ಯಮದ ಬಗ್ಗೆ ಎಷ್ಟು ಸ್ಪಷ್ಟತೆ ಅವರಲ್ಲಿದೆ ಎಂದು ಗಮನಿಸುತ್ತೇನೆ. ನಾನು ಟಾಟಾ ಗ್ರೂಪ್ ನಲ್ಲಿದ್ದಾಗ ಯಾವಾಗಲೂ ಸ್ಟಾರ್ಟ್ ಅಪ್ ಬ್ಯುಸಿನೆಸ್ ಬಗ್ಗೆ ಗಮನಹರಿಸುತ್ತಿದ್ದೆ. ಆದರೆ ಅದಕ್ಕೆ ಕೈಹಾಕಲು ಹೋಗಿರಲಿಲ್ಲ, ಏಕೆಂದರೆ ಟಾಟಾ ಗ್ರೂಪ್ ನ ಹಿತಾಸಕ್ತಿ ಜೊತೆ ಸಂಘರ್ಷವಾಗುತ್ತಿತ್ತು. ನಾನು ನಿವೃತ್ತಿ ಹೊಂದಿದ ಮೇಲೆ ಇದೀಗ ಅದರಲ್ಲಿ ಹೂಡಿಕೆ ಮಾಡಲು ಮುಕ್ತನಾಗಿದ್ದೇನೆ ಎಂದಿದ್ದಾರೆ.


ನಾಲ್ಕು ವರ್ಷಗಳ ಹಿಂದೆ ಸ್ಟಾರ್ಟ್ ಅಪ್ ಉದ್ಯಮದಲ್ಲಿ ಟಾಟಾ ಗ್ರೂಪ್ ಹೂಡಿಕೆ ಮಾಡಲು ಆರಂಭಿಸಿತು. ಯೂನಿಕೋರ್ನ್, ಇ-ಕಾಮರ್ಸ್ ಕಂಪೆನಿಗಳಾದ ಸ್ನಾಪ್ ಡೀಲ್, ಒಲಾ, ಅರ್ಬನ್ ಲ್ಯಾಡರ್, ಕ್ಸಿಯೊಮಿ, ಪೇಟಿಎಂ, ಅರ್ಬನ್ ಕ್ಲಾಪ್, ಲೆನ್ಸ್ ಕಾರ್ಟ್ ಮೊದಲಾದ ಕಂಪೆನಿಗಳಲ್ಲಿ ಟಾಟಾ ಹೂಡಿಕೆ ಮಾಡಿದೆ. ಇತ್ತೀಚೆಗೆ ರತನ್ ಟಾಟಾ ಟಾಟಾ ಮೋಟರ್ಸ್ ನಲ್ಲಿ ಹೂಡಿಕೆ ಮಾಡಲು ಉತ್ಸುಕತೆಯನ್ನು ತೋರಿಸಿದ್ದರು. ಅದು ದೇಶೀಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುವ ಸಂಸ್ಥೆಯಾಗಿದೆ. 

SCROLL FOR NEXT