ವಾಣಿಜ್ಯ

ಎಸ್ ಬಿಐ ಗ್ರಾಹಕರಿಗೆ ಬಂಪರ್; ಸಾಲದ ಮೇಲಿನ ಬಡ್ಡಿದರ ಇಳಿಕೆ

Srinivasamurthy VN

ನವದೆಹಲಿ: ಭಾರತದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಸಂಸ್ಥೆ ಎಸ್ ಬಿಐ ತನ್ನ ಗ್ರಾಹಕರಿಗೆ ಬಂಪರ್ ಘೋಷಣೆ ಮಾಡಿದ್ದು, ಇಂದಿನಿಂದಲೇ ಜಾರಿಯಾಗುವಂತೆ ಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡಿದೆ.

ಎಸ್ ಬಿಐನ ಗ್ರಾಹಕರು ತೆಗೆದುಕೊಂಡಿರುವ ಗೃಹಸಾಲ ಮತ್ತು ವಾಹನ ಸಾಲಗಳು ಸೇರಿದಂತೆ ವಿವಿಧ ಬಗೆಯ ಸಾಲಗಳ ಮೇಲಿನ ಬಡ್ಡಿದರದಲ್ಲಿ ಶೇ.0.10ರಷ್ಟು ಇಳಿಕೆ ಮಾಡಿದೆ. ಅದರಂತೆ ಶೇಕಡಾ 8.25ರಷ್ಟಿದ್ದ ಬಡ್ಡಿ ದರ ಈಗ ಶೇಕಡಾ 8.15ರಷ್ಟಾಗಿದೆ. ಮೇ.1 ರಂದು ಎಸ್ ಬಿಐ ಸಾಲದ ಮೇಲಿನ ಬಡ್ಡಿ ದರದಲ್ಲಿ 40 ಬೇಸಿಕ್ ಪಾಯಿಂಟ್ ಇಳಿಕೆ ಮಾಡಿತ್ತು. ಮೇ ತಿಂಗಳಿಗೂ ಮೊದಲು ಎಸ್ ಬಿಐ ಎಂಸಿಎಲ್ಆರ್ ಬಡ್ಡಿ ದರ ಶೇಕಡಾ 8.55 ನಷ್ಟಿತ್ತು.

ಇನ್ನು ಈ ಹಿಂದೆಯೇ ಎಸ್ ಬಿಐ ಈ ಯೋಜನೆಯನ್ನು ಘೋಷಣೆ ಮಾಡಿತ್ತಾದರೂ ಇಂದಿನಿಂದಲೇ ಜಾರಿಯಾಗಲಿದೆ. ಅದರಂತೆ ಒಂದು ವರ್ಷದಲ್ಲಿ ಐದನೇ ಬಾರಿಗೆ ಎಸ್ ಬಿಐ ತನ್ನ ಎಂಇಎಲ್ಆರ್ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿದಂತಾಗದೆ. ಇದಕ್ಕೂ ಮುನ್ನ ಜೂನ್ 10 ರಂದು ಬ್ಯಾಂಕ್ ಬಡ್ಡಿ ದರವನ್ನು ಇಳಿಕೆ ಮಾಡಿತ್ತು.

ಇತ್ತೀಚೆಗಷ್ಟೇ ಎಸ್ ಬಿಐ ತನ್ನ ಗ್ರಾಹಕರ ಎಫ್ ಡಿ (ಫಿಕ್ಸೆಡ್ ಡೆಪಾಸಿಟ್-ಸ್ಥಿರ ಠೇವಣಿ) ಬಡ್ಡಿದರವನ್ನು ಇಳಿಕೆ ಮಾಡಿ ನಿರಾಶೆ ಮೂಡಿಸಿತ್ತು. ಆದರೆ ಈಗ ಮತ್ತೆ ಎಫ್ ಡಿ ಮೇಲಿನ ಬಡ್ಡಿದರವನ್ನು ಮತ್ತೆ ಕಡಿತ ಮಾಡಲಾಗಿದ್ದು, ಶೇ.0.20 ರಿಂದ ಶೇ.0.25ರವರೆಗೂ ಬಡ್ಡಿದರ ಕಡಿತ ಮಾಡಿದೆ. 

ಆ ಮೂಲಕ ಸ್ಥಿರ ಠೇವಣಿ ಬಡ್ಡಿದರ ಶೇ.6.70 ನಿಂದ ಶೇ.6.50 ಕ್ಕೆ(ಒಂದು ವರ್ಷಕ್ಕಿಂತ ಹೆಚ್ಚು, ಎರಡು ವರ್ಷಕ್ಕಿಂತ ಹೆಚ್ಚು ಕಾಲ ಸ್ಥಿರ ಠೇವಣಿ ಇಡುವವರಿಗೆ) ಇಳಿಕೆಯಾಗಲಿದೆ. ಹಿರಿಯ ನಾಗರಿಕರ ಸ್ಥಿರ ಠೇವಣಿ ಬಡ್ಡಿದರವನ್ನು, ಶೇ. 7.20 ರಿಂದ ಶೇ.7.00 ಕ್ಕೆ ಇಳಿಸಲಾಗಿದೆ.

ಇದೀಗ ಸಾಲದ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡುವ ಮೂಲಕ ಅಲ್ಪ ಸಮಾಧಾನ ತಂದಿದೆ. 

SCROLL FOR NEXT