ವಾಣಿಜ್ಯ

ಸೆ. 26, 27ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ

Lingaraj Badiger

ಕೋಲ್ಕತಾ: 10 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ನಾಲ್ಕು ಬ್ಯಾಂಕ್ ಅಧಿಕಾರಿಗಳ ಸಂಘಗಳು ಸೆಪ್ಟೆಂಬರ್ 26 ಮತ್ತು 27 ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ.

ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ(ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ(ಎಐಬಿಒಎ), ಇಂಡಿಯನ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್(ಐಎನ್‌ಬಿಒಸಿ) ಮತ್ತು ನ್ಯಾಷನಲ್ ಆರ್ಗನೈಸೇಶನ್ ಆಫ್ ಬ್ಯಾಂಕ್ ಅಧಿಕಾರಿಗಳು(ನೊಬೊ) ಜಂಟಿಯಾಗಿ ಸೆಪ್ಟೆಂಬರ್ 26 ಮತ್ತು 27 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕಾಗಿ ಕರೆ ನೀಡಿವೆ ಎಂದು ಎಐಬಿಒಸಿ ಪ್ರಧಾನ ಕಾರ್ಯದರ್ಶಿ ಸೌಮ್ಯ ದತ್ತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬ್ಯಾಂಕಿಂಗ್ ಉದ್ಯಮವನ್ನು ಸಂಪೂರ್ಣವಾಗಿ ಮುಚ್ಚುವ 48 ಗಂಟೆಗಳ ಈ ಮುಷ್ಕರಕ್ಕೆ ಇತರೆ ಅನೇಕ ಸಂಘಗಳು ಮತ್ತು ಸಂಸ್ಥೆಗಳು ತಮ್ಮೊಂದಿಗೆ ಸೇರಿಕೊಳ್ಳಲಿವೆ ಎಂದು ದತ್ತಾ ಹೇಳಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಗಸ್ಟ್ 30ರಂದು 10 ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ನಾಲ್ಕು ಬ್ಯಾಂಕ್‍ಗಳಿಗೆ ವಿಲೀನಗೊಳಿಸಿರುವ ಕುರಿತು ಘೋಷಣೆ ಮಾಡಿದ್ದರು. ಐದು ವರ್ಷಗಳ ಆರ್ಥಿಕತೆಯ ಕುಂಠಿತವನ್ನು ಸರಿ ದಾರಿಗೆ ತಂದು, ಬೆಳೆವಣಿಗೆಯತ್ತ ಕೊಂಡೊಯ್ಯಬೇಕು. ಹೀಗಾಗಿ ಸಣ್ಣ ಬ್ಯಾಂಕ್‍ಗಳನ್ನು ವಿಲೀನಗೊಳಿಸಿ ಬೃಹತ್ ಬ್ಯಾಂಕ್‍ಗಳನ್ನಾಗಿ ಮಾಡಿ, ವಿಶ್ವ ದರ್ಜೆಗೆ ಕೊಂಡೊಯ್ಯಬೇಕು ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು.

SCROLL FOR NEXT