ವಾಣಿಜ್ಯ

ಪ್ಲೇ ಸ್ಟೋರ್ ನೀತಿ; ಗೂಗಲ್ ಗೆ 936.44 ಕೋಟಿ ರೂಪಾಯಿ ದಂಡ, 1 ತಿಂಗಳ ಅವಧಿಯಲ್ಲಿ ಟೆಕ್ ದೈತ್ಯ ಸಂಸ್ಥೆಗೆ 2 ನೇ ಶಾಕ್! 

Srinivas Rao BV

ನವದೆಹಲಿ: ಗೂಗಲ್ ನ ಪ್ಲೇ ಸ್ಟೋರ್ ನೀತಿಗಳ ವಿರುದ್ಧ ಭಾರತದ ಸ್ಪರ್ಧಾತ್ಮಕ ಆಯೋಗ 2 ನೇ ಬಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, 936.44 ಕೋಟಿ ರೂಪಾಯಿ ದಂಡ ವಿಧಿಸಿದೆ.

ಪ್ಲೇ ಸ್ಟೋರ್ ನೀತಿಗಳಿಗೆ ಸಂಬಂಧಿಸಿದಂತೆ ಗೂಗಲ್  ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಸ್ಪರ್ಧೆಯನ್ನು ಕೊಲ್ಲುತ್ತಿದೆ ಎಂಬುದು ಸಂಸ್ಥೆಯ ಮೇಲೆ ಸಿಸಿಐ ನ ಪ್ರಮುಖ ಆಕ್ಷೇಪವಾಗಿದೆ.

ಅನ್ಯಾಯದ ವ್ಯಾಪಾರ ಪದ್ಧತಿಗಳನ್ನು ಕೈಬಿಟ್ಟು, ನಿಗದಿತ ಕಾಲಮಿತಿಯಲ್ಲಿ ಸ್ಪರ್ಧಾತ್ಮಕ ವಿರೋಧಿ ಸಮಸ್ಯೆಗಳನ್ನು ಬಗೆಹರಿಸುವಂತೆ ಗೂಗಲ್ ಗೆ ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಸೂಚಿಸಿದೆ.
 
ಒಂದೇ ವಾರದ ಅವಧಿಯಲ್ಲಿ ಸಿಸಿಐ ಗೂಗಲ್ ವಿರುದ್ಧ 2ನೇ ಬಾರಿಗೆ ದಂಡ ವಿಧಿಸಿದೆ. ಅ.20 ರಂದು ನಿಯಂತ್ರಕ ಸಂಸ್ಥೆ ಗೂಗಲ್ ಗೆ ಆಂಡ್ರಾಯ್ಡ್ ಉಪಕರಣಗಳಲ್ಲಿ ತನ್ನ ಪ್ರಾಬಲ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ 1,337.76 ಕೋಟಿ ರೂಪಾಯಿ ದಂಡ ವಿಧಿಸಿತ್ತು. 

ಆಂಡ್ರಾಯ್ಡ್ ಮೊಬೈಲ್ ವ್ಯವಸ್ಥೆಯಲ್ಲಿ ಆಪ್ ಡೆವಲಪರ್ ಗಳಿಗೆ ಗೂಗಲ್ ಪ್ಲೇ ಸ್ಟೋರ್ ಪ್ರಮುಖ ವಿತರಣೆಯ ವೇದಿಕೆಯಾಗಿದ್ದು, ಸಿಸಿಐ ಪ್ರಕಾರ, ಪಾವತಿ ಮಾಡಬೇಕಿರುವ ಆಪ್ ಗಳಿಗೆ ಜಿಪಿಬಿಎಸ್ (ಗೂಗಲ್ ಪ್ಲೇ ಬಿಲ್ಲಿಂಗ್ ಸಿಸ್ಟಮ್) ನ ಕಡ್ಡಾಯ ಬಳಕೆಯ ಆಧಾರದಲ್ಲಿ ಆಪ್ ಡೆವಲಪರ್ ಗಳಿಗೆ ಪ್ಲೇ ಸ್ಟೋರ್ ಗೆ ಪ್ರವೇಶ ಕಲ್ಪಿಸುವುದು ಹಾಗೂ ಇನ್-ಆಪ್ ಖರೀದಿಗಳು ಆಪ್ ಡೆವಲಪರ್ ಗಳಿಗೆ ಅನ್ಯಾಯದ ಸ್ಥಿತಿಯನ್ನು ಉಂಟು ಮಾಡಲಿದೆ ಎಂದು ಸಿಸಿಐ ಹೇಳಿದೆ.
 

SCROLL FOR NEXT