ವಾಣಿಜ್ಯ

2022ನೇ ಹಣಕಾಸು ವರ್ಷದಲ್ಲಿ ದುಪ್ಪಟ್ಟು ನಷ್ಟ ಕಂಡ ಸ್ವಿಗ್ಗಿ!

Shilpa D

ಬೆಂಗಳೂರು: ಕಳೆದ ಹಣಕಾಸು ವರ್ಷದಲ್ಲಿ 1,617 ಕೋಟಿ ರೂಪಾಯಿಗಳ ನಷ್ಟ ದಾಖಲಿಸಿದ್ದ ಆನ್‌ಲೈನ್ ಆಹಾರ ವಿತರಣಾ ಪ್ಲಾಟ್‌ಫಾರ್ಮ್ ಸ್ವಿಗ್ಗಿ ಹಣಕಾಸು ವರ್ಷ2022ರಲ್ಲಿ ನಷ್ಟ ದ್ವಿಗುಣಗೊಂಡು, 3,629 ಕೋಟಿ ರೂಪಾಯಿಗಳಿಗೆ ತಲುಪಿದೆ. ಇನ್ನು ಒಟ್ಟು ವೆಚ್ಚಗಳು ಹಣಕಾಸು ವರ್ಷ 22ರಲ್ಲಿ ಶೇಕಡಾ 131ರಷ್ಟು ಏರಿಕೆಯಾಗಿ, 9,574.5 ಕೋಟಿ ರೂ. ಮುಟ್ಟಿದೆ.

ರಿಜಿಸ್ಟ್ರಾರ್ ಆಫ್ ಕಂಪನೀಸ್  ಬಳಿ ದಾಖಲಿಸಿದ ವಾರ್ಷಿಕ ಹಣಕಾಸು ಹೇಳಿಕೆ ಪ್ರಕಾರ, ಹಣಕಾಸು ವರ್ಷ 22ರ ಕೊನೆಯ ತ್ರೈಮಾಸಿಕದಲ್ಲಿ ಸ್ವಿಗ್ಗಿ ಇನ್ವೆಸ್ಕೊ ನೇತೃತ್ವದಲ್ಲಿ 700 ಮಿಲಿಯನ್ ಡಾಲರ್ ಮೊತ್ತವನ್ನು ಸಂಗ್ರಹಿಸಿದ ನಂತರ "ಡೆಕಾಕಾರ್ನ್"ಆಯಿತು.

ಈ ಮಧ್ಯೆ, ಸ್ವಿಗ್ಗಿಯ ಆದಾಯವು ಹಣಕಾಸು ವರ್ಷ 21ರಲ್ಲಿ 2,547 ಕೋಟಿ ರೂಪಾಯಿಗಳಿಗೆ ವಿರುದ್ಧವಾಗಿ ಹಣಕಾಸು ವರ್ಷ 22ರ ಅವಧಿಯಲ್ಲಿ 2.2 ಪಟ್ಟು ಜಾಸ್ತಿಯಾಗಿ, 5,705 ಕೋಟಿ ರೂಪಾಯಿಗಳಿಗೆ ಏರಿಕೆ ಆಗಿದೆ. ಎಂಟ್ರಾಕರ್ ಪ್ರಕಾರ, ಹೊರಗುತ್ತಿಗೆ ಬೆಂಬಲ ವೆಚ್ಚವು ಕಂಪನಿಯ ಒಟ್ಟು ವೆಚ್ಚದಲ್ಲಿ ಶೇ 24.5ರಷ್ಟು ಹೊಂದಿದೆ.

ಈ ನಿರ್ದಿಷ್ಟ ವೆಚ್ಚವು ಹಣಕಾಸು ವರ್ಷ 21ರಲ್ಲಿ 1,031 ಕೋಟಿಗಳಿಂದ ಹಣಕಾಸು ವರ್ಷ 22ರಲ್ಲಿ 2,350 ಕೋಟಿಗಳಿಗೆ 2.3 ಪಟ್ಟು ಹೆಚ್ಚಾಗಿದೆ. ಹಣಕಾಸು ವರ್ಷ 22ರ ಅವಧಿಯಲ್ಲಿ ಅದರ ಜಾಹೀರಾತು ಮತ್ತು ಪ್ರಚಾರದ ವೆಚ್ಚಗಳು 4 ಪಟ್ಟು ಏರಿಕೆಯಾಗಿ, 1,848.7 ಕೋಟಿ ರೂಪಾಯಿಗೆ ತಲುಪಿದೆ ಎಂದು ವರದಿ ತಿಳಿಸಿದೆ.

SCROLL FOR NEXT