ನವದೆಹಲಿ: ಬಳಸಿದ ವಾಹನಗಳ ಮೇಲಿನ ತೆರಿಗೆ ದರವನ್ನು ಶೇಕಡಾ 12ರಿಂದ ಶೇಕಡಾ 18ಕ್ಕೆ ಹೆಚ್ಚಿಸುವ ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್‌ನ ಇತ್ತೀಚಿನ ನಿರ್ಧಾರದ ನಂತರ ಬಳಸಿದ ಕಾರು ಮಾರುಕಟ್ಟೆಯು ಸಮಸ್ಯೆ ಎದುರಿಸುವ ಸಾಧ್ಯತೆಯಿದೆ.
ತೆರಿಗೆ ಹೆಚ್ಚಳದಿಂದ ಉದ್ಯಮದ ಬೆಳವಣಿಗೆಯನ್ನು ಕುಂಠಿತವಾಗುವುದಲ್ಲದೆ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಅವಲಂಬಿಸಿರುವ ವ್ಯವಹಾರಗಳ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ನಂಬಿದ್ದಾರೆ.
ಸೆಕೆಂಡ್ ಹ್ಯಾಂಡ್ ಕಾರುಗಳು ಲಕ್ಷಾಂತರ ಭಾರತೀಯರಿಗೆ ಆಸರೆಯಾಗಿದೆ, ವಿಶೇಷವಾಗಿ ದ್ವಿತೀಯ ಮತ್ತು ತೃತೀಯ ದರ್ಜೆ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ, ಮಧ್ಯಮ ವರ್ಗದ ಜನರು ಕಾರು ಹೊಂದಬೇಕೆಂಬವರ ಕನಸಿಗೆ ಧಾರೆಯೆರೆಯುತ್ತದೆ. ಇತ್ತೀಚಿನ ಜಿಎಸ್‌ಟಿ ಹೆಚ್ಚಳದಿಂದ ಕೈಗೆಟುಕುತ್ತಿದ್ದ ಕಾರಿನ ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ ಎಂದು CARS24 ನ ಸಂಸ್ಥಾಪಕ ಮತ್ತು ಸಿಇಒ ವಿಕ್ರಮ್ ಚೋಪ್ರಾ ಹೇಳುತ್ತಾರೆ.
ಜಿಎಸ್ ಟಿ ಪರಿಷ್ಕರಣೆಯು ಕಾರಿನ ಆಧಾರದ ಮೇಲೆ ವಹಿವಾಟು ನಡೆಸುವ ವ್ಯಾಪಾರಗಳು ಮಾರಾಟ ಮಾಡುವ ವಾಹನಗಳಿಗೆ ಅನ್ವಯಿಸುತ್ತದೆ. ಉದಾಹರಣೆಗೆ, ಬಳಸಿದ ಕಾರನ್ನು 2 ಲಕ್ಷಕ್ಕೆ ಖರೀದಿಸಿದರೆ ಜಿಎಸ್ ಟಿ ದರ ಪರಿಷ್ಕರಣೆ ನಂತರ 2.4 ಲಕ್ಷ ರೂಪಾಯಿಗೆ, ಜಿಎಸ್ ಟಿ ಶೇಕಡಾ 18ರಷ್ಟು ಹೆಚ್ಚಳವಾದರೆ 40 ಸಾವಿರ ಮಾರ್ಜಿನ್ ಮೇಲೆ ಜಿಎಸ್ ಟಿ ಅನ್ವಯವಾಗುತ್ತದೆ. ಈ ಹಿಂದೆ ಇಂತಹ ವಹಿವಾಟುಗಳ ಮೇಲಿನ ಜಿಎಸ್‌ಟಿ ಶೇ.12ರಷ್ಟಿತ್ತು. ಬಳಸಿದ ಕಾರುಗಳ ವೈಯಕ್ತಿಕ ಖರೀದಿದಾರರು ಮತ್ತು ಮಾರಾಟಗಾರರು ಶೇಕಡಾ 12 ಜಿಎಸ್ ಟಿ ದರವನ್ನು ಪಾವತಿಸುವುದನ್ನು ಮುಂದುವರಿಸುತ್ತಾರೆ.
ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆ ಸ್ಥಳವಾದ ಡ್ರೂಮ್‌ನ ಸಂಸ್ಥಾಪಕ ಮತ್ತು ಸಿಇಒ ಸಂದೀಪ್ ಅಗರ್‌ವಾಲ್, ಕೆಲವು ರೈಡ್-ಹೇಲಿಂಗ್ ಕಂಪನಿಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಪೂರ್ವ-ಮಾಲೀಕತ್ವದ ಕಾರುಗಳನ್ನು ಬಂಡವಾಳ ಆಸ್ತಿಗಳಾಗಿ ಖರೀದಿಸುವ ವ್ಯವಹಾರಗಳು ಹೆಚ್ಚಿನ ತೆರಿಗೆ ದರಗಳಿಂದ ವ್ಯಾಪಾರ ಕುಸಿಯುತ್ತವೆ ಎಂದರು.
ತೆರಿಗೆ ಹೆಚ್ಚಳವು ಮುಖ್ಯವಾಗಿ ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವೆಹಿಕಲ್ (Electric Vehicle) ವಿಭಾಗಕ್ಕೆ ಸಂಬಂಧಿಸಿದೆ. ಹೊಸ ಎಲೆಕ್ಟ್ರಿಕ್ ವಾಹನಗಳಿಗೆ ಶೇಕಡಾ 5ಕ್ಕಿಂತ ಕಡಿಮೆ ತೆರಿಗೆ ವಿಧಿಸಲಾಗುತ್ತದೆ, ಬಳಸಿದ EV ಗಳ ಮೇಲಿನ ಶೇಕಡಾ 18ರಷ್ಟು GST ಮರುಮಾರಾಟ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ತಗ್ಗಿಸಬಹುದು. EVಗಳನ್ನು ಮರುಮಾರಾಟ ಮಾಡುವ ವ್ಯಾಪಾರಗಳು ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳನ್ನು ಎದುರಿಸಬೇಕಾಗುತ್ತದೆ.
ದುರಸ್ತಿ ಮತ್ತು ನಿರ್ವಹಣೆ ಸೇವೆಗಳು ಈಗಾಗಲೇ ಶೇಕಡಾ 18ರಷ್ಟು ಜಿಎಸ್ ಟಿಯನ್ನು ಆಕರ್ಷಿಸುತ್ತವೆ. ಕಳೆದ ವಾರ, ಕೊರಿಯಾದ ವಾಹನ ತಯಾರಕ ಕಿಯಾ ಬಳಸಿದ ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್ ಟಿಯನ್ನು ಶೇಕಡಾ 12 ರಿಂದ ಶೇಕಡಾ 18ಕ್ಕೆ ಹೆಚ್ಚಿಸುವುದರ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು, ಅಂತಹ ಕ್ರಮವು ಭಾರತೀಯ ವಾಹನ ಉದ್ಯಮದ ಮೇಲೆ ಅಡ್ಡಿಯನ್ನುಂಟುಮಾಡಬಹುದು ಎಂದು ಹೇಳಿತ್ತು.