ಮುಂಬೈ: ಭಾರತೀಯ ಷೇರುಮಾರುಕಟ್ಟೆ ಏರಿಳಿತ ಮುಂದುವರೆದಿದ್ದು, ವಾರದ ಮೊದಲ ದಿನವೇ ಮಾರುಕಟ್ಟೆ ಇಳಿಕೆಯೊಂದಿಗೆ ತನ್ನ ದಿನದ ವಹಿವಾಟು ಅಂತ್ಯಗೊಳಿಸಿದೆ.
ಸೋಮವಾರ ಭಾರತೀಯ ಷೇರುಮಾರುಕಟ್ಟೆ ನಿರಾಶದಾಯಕ ವಹಿವಾಟು ನಡೆಸಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ರೆಡ್ ನಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.57ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಶೇ0.71ರಷ್ಟು ಕುಸಿತವಾಗಿದೆ. ಸೆನ್ಸೆಕ್ಸ್ ಇಂದು 450.94 ಅಂಕಗಳ ಇಳಿಕೆಯೊಂದಿಗೆ 78,248.13 ಅಂಕಗಳಿಗೆ ಕುಸಿದಿದ್ದರೆ, ನಿಫ್ಟಿ 168.50 ಅಂಕಗಳ ಇಳಿಕೆಯೊಂದಿಗೆ 23,644.90 ಅಂಕಗಳಿಗೆ ಕುಸಿತವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಜೊಮ್ಯಾಟೊ, ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಟಾಟಾ ಮೋಟಾರ್ಸ್ ಶೇ.2.24 ರಷ್ಟು ಹೆಚ್ಚು ಕುಸಿತ ಕಂಡಿದೆ.
ಟೈಟಾನ್, ಟಾಟಾ ಸ್ಟೀಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಹೀಂದ್ರಾ & ಮಹೀಂದ್ರಾ, ಎನ್‌ಟಿಪಿಸಿ, ಐಸಿಐಸಿಐ ಬ್ಯಾಂಕ್, ಮಾರುತಿ, ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇನ್ಫೋಸಿಸ್ ಸಂಸ್ಥೆಯ ಷೇರುಗಳು ನಷ್ಟ ಅನುಭವಿಸಿವೆ.