ನವದೆಹಲಿ: ಈ ವರ್ಷ ಜುಲೈ 1 ರವರೆಗೆ ಅಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ 51 ಪ್ರಯಾಣಿಕರನ್ನು ವಿಮಾನಯಾನ ಸಂಸ್ಥೆಗಳ ನೋ-ಫ್ಲೈ ಪಟ್ಟಿಗೆ ಸೇರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ ತಿಳಿಸಿದೆ.
ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್(DGCA) ಅಶಿಸ್ತಿನ ವರ್ತನೆ ತೋರಿದ ಪ್ರಯಾಣಿಕರನ್ನು ನಿರ್ವಹಿಸಲು ನಿಯಮಾವಳಿಗಳನ್ನು ಹೊಂದಿದೆ. ಆ ಪ್ರಕಾರ ಅಶಿಸ್ತಿನ ಪ್ರಯಾಣಿಕರನ್ನು ನೋ-ಫ್ಲೈ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ರಾಜ್ಯಸಭೆಗೆ ಮಾಹಿತಿ ನೀಡಿದರು.
ಕಳೆದ ಐದು ವರ್ಷಗಳಲ್ಲಿ ಒಟ್ಟು 300 ಪ್ರಯಾಣಿಕರನ್ನು ನೋ-ಫ್ಲೈ ಲಿಸ್ಟ್‌ನಲ್ಲಿ ಇರಿಸಲಾಗಿದೆ. ಈ ವರ್ಷ ಜುಲೈ 1 ರವರೆಗೆ 51 ಜನರನ್ನು ಈ ಪಟ್ಟಿಗೆ ಸೇರಿಸಲಾಗಿದೆ. 2023 ರಲ್ಲಿ, 110 ಪ್ರಯಾಣಿಕರನ್ನು ನೋ-ಫ್ಲೈ ಪಟ್ಟಿಗೆ ಸೇರಿಸಲಾಗಿತ್ತು ಮತ್ತು 2022 ಹಾಗೂ 2021 ರಲ್ಲಿ ಕ್ರಮವಾಗಿ 63 ಮತ್ತು 66 ಪ್ರಯಾಣಿಕರನ್ನು ನೋ-ಫ್ಲೈ ಪಟ್ಟಿಗೆ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿಮಾನದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ವಿಮಾನದಲ್ಲಿ ಕಾನೂನುಬಾಹಿರ/ವಿಚ್ಛಿದ್ರಕಾರಕ ನಡವಳಿಕೆಯನ್ನು ನಿರ್ವಹಿಸಲು ಮತ್ತು ವಿಮಾನದ / ವ್ಯಕ್ತಿಗಳ/ ಆಸ್ತಿ / ಉತ್ತಮ ಸುವ್ಯವಸ್ಥೆ ಮತ್ತು ಶಿಸ್ತು ಖಚಿತಪಡಿಸಿಕೊಳ್ಳಲು ಸಾಕಷ್ಟು ನಿಯಂತ್ರಣ ಚೌಕಟ್ಟುಗಳು ಜಾರಿಯಲ್ಲಿವೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.