ನವದೆಹಲಿ: Paytm ಬ್ರಾಂಡ್‌ನ ಮಾಲೀಕರಾಗಿರುವ ಫಿನ್‌ಟೆಕ್ ಸಂಸ್ಥೆ One97 ಕಮ್ಯುನಿಕೇಷನ್ಸ್ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಮತ್ತು ಕೆಲಸ ಕಳೆದುಕೊಂಡ ನೌಕರರ ಬೇರೆ ಕಡೆ ಕೆಲಸ ಪಡೆಯಲು ಔಟ್‌ಪ್ಲೇಸ್‌ಮೆಂಟ್ ಬೆಂಬಲವನ್ನು ನೀಡುತ್ತಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ್ 2024ರ ತ್ರೈಮಾಸಿಕದಲ್ಲಿ Paytmನ ಸೇಲ್ಸ್ ವಿಭಾಗದ ಸುಮಾರು 3,500 ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಪೇಟಿಎಂನಲ್ಲಿ 40,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದು, ಈಗ 3,500 ಮಂದಿಯ ಲೇ ಆಫ್ ನಂತರ ಸಿಬ್ಬಂದಿ ಸಂಖ್ಯೆ 36,521 ಕ್ಕೆ ಇಳಿದಿದೆ.
ಭಾರತೀಯ ರಿಸರ್ವ್ ಬ್ಯಾಂಕ್, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ನಿರ್ಬಂಧ ವಿಧಿಸಿದ್ದು, ಒನ್97 ಕಮ್ಯೂನಿಕೇಶನ್ಸ್ನ ವಿವಿಧ ಬಿಸಿನೆಸ್ಗಳಿಗೆ ಹೊಡೆತ ಬಿದ್ದಂತಾಗಿದೆ. ನಷ್ಟದ ಪ್ರಮಾಣವೂ ಹೆಚ್ಚುತ್ತಿದೆ. ಜನವರಿಯಿಂದ ಮಾರ್ಚ್ವರೆಗಿನ ಕ್ವಾರ್ಟರ್ನಲ್ಲಿ ಪೇಟಿಎಂಗೆ ಆದ ನಷ್ಟ 550 ಕೋಟಿ ರೂ. ಈ ನಷ್ಟವನ್ನು ಕಡಿಮೆ ಮಾಡಬೇಕೆಂದರೆ ಸಂಸ್ಥೆಯ ಸಿಬ್ಬಂದಿ ವರ್ಗದ ಮರುರಚನೆ ಮಾಡಬೇಕಾಗುತ್ತದೆ. ಉದ್ಯೋಗಿಗಳ ಸಂಖ್ಯೆ ಮೊಟಕುಗೊಳಿಸುವುದು ಅನಿವಾರ್ಯವಾಗಿದೆ.
ಕಂಪನಿಯ ಮಾನವ ಸಂಪನ್ಮೂಲ ತಂಡಗಳು ಪ್ರಸ್ತುತ ನೇಮಕ ಮಾಡುತ್ತಿರುವ 30ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಸಕ್ರಿಯವಾಗಿ ಸಹಕರಿಸುತ್ತಿವೆ ಮತ್ತು ಉದ್ಯೋಗಿಗಳಿಗೆ ಬೇರೆಡೆ ಕೆಲಸ ಕೊಡಿಸಲು ಸಹಾಯ ಮಾಡುತ್ತಿವೆ ಎಂದು ಪಿಟಿಐ ವರದಿ ಮಾಡಿದೆ.