ಕೈಗಾರಿಕಾ ಉತ್ಪಾದನೆ
ಕೈಗಾರಿಕಾ ಉತ್ಪಾದನೆ Online desk
ವಾಣಿಜ್ಯ

ಭಾರತದ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆ ಜನವರಿಯಲ್ಲಿ ಶೇ.3.8 ಕ್ಕೆ ಕುಸಿತ

Srinivas Rao BV

ನವದೆಹಲಿ: ಭಾರತದ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆ ಜನವರಿ ತಿಂಗಳಲ್ಲಿ ಶೇ.3.8ಕ್ಕೆ ಕುಸಿತ ಕಂಡಿದೆ. ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯನ್ನು ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (IIP) ಮೂಲಕ ಮಾಪನ ಮಾಡಲಾಗುತ್ತದೆ. ಡಿಸೆಂಬರ್ ನಲ್ಲಿ ಬೆಳವಣಿಗೆ ದರ ಶೇ.4.2 ರಷ್ಟಿತ್ತು.

ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಡಿಸೆಂಬರ್ ನಲ್ಲಿ ಶೇ.4.5 ರಷ್ಟು ಬೆಳವಣಿಗೆ ಸಾಧಿಸಿದ್ದ ಉತ್ಪಾದನಾ ವಲಯ ಜನವರಿ ತಿಂಗಳಲ್ಲಿ ಶೇ.3.2 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನಾ ಕ್ಷೇತ್ರದ ಪ್ರಮುಖ ವಲಯಗಳಾಗಿವೆ.

ಈ ವಲಯಗಳು ಐಐಪಿಯ 40% ರಷ್ಟಿದ್ದು ಮತ್ತು ಕೈಗಾರಿಕಾ ಬೆಳವಣಿಗೆಯ ಪ್ರವೃತ್ತಿಗಳಿಗೆ ಪ್ರಮುಖ ಸೂಚಕವಾಗಿ ಕಾರ್ಯನಿರ್ವಹಿಸುತ್ತವೆ. ಜನವರಿ 2023 ರಲ್ಲಿ, ಕೈಗಾರಿಕಾ ಉತ್ಪಾದನೆಯು 5.8% ರಷ್ಟು ಬೆಳೆದಿತ್ತು. ಈ ವರ್ಷದ ಜನವರಿಯಲ್ಲಿ, ಗಣಿಗಾರಿಕೆ ಮತ್ತು ವಿದ್ಯುತ್ ಉತ್ಪಾದನೆಯು ಅನುಕ್ರಮವಾಗಿ 5.9% ಮತ್ತು 5.6% ರಷ್ಟು ಏರಿಕೆಯಾಗಿದೆ, ಡಿಸೆಂಬರ್ 2023 ರಲ್ಲಿ ಉತ್ಪಾದನೆ 5.2% ಮತ್ತು 1.2% ರಷ್ಟಿತ್ತು.

ಐಸಿಆರ್ ಎ ಮುಖ್ಯ ಅರ್ಥಶಾಸ್ತ್ರಜ್ಞರಾದ ಅದಿತಿ ನಾಯರ್ ಪ್ರಕಾರ, ಫೆಬ್ರವರಿಯಲ್ಲಿ IIP ಬೆಳವಣಿಗೆಯು 3-4% ನಲ್ಲಿ ಉಳಿಯುವ ಸಾಧ್ಯತೆಯಿದೆ. ಏತನ್ಮಧ್ಯೆ, ಗ್ರಾಹಕ-ಬೆಲೆ ಆಧಾರಿತ ಹಣದುಬ್ಬರ (CPI) ಎಂದೂ ಕರೆಯಲ್ಪಡುವ ಚಿಲ್ಲರೆ ಹಣದುಬ್ಬರ ಜನವರಿಯಲ್ಲಿದ್ದ 5.1% ಗೆ ಹೋಲಿಸಿದರೆ ಫೆಬ್ರವರಿಯಲ್ಲಿ 5.09% ರಷ್ಟಾಗಿದೆ. ಹಿಂದಿನ ವರ್ಷದ ಇದೇ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ 6.44% ರಷ್ಟಿತ್ತು.

ಗ್ರಾಹಕ ದರ ಸೂಚ್ಯಂಕ ಬ್ಯಾಸ್ಕೆಟ್‌ನ 45.9% ರಷ್ಟಿರುವ ಆಹಾರ ಹಣದುಬ್ಬರ ಇನ್ನೂ ಏರುಗತಿಯಲ್ಲಿದ್ದು, ಈ ಹಿಂದಿನ ತಿಂಗಳಲ್ಲಿದ್ದ 8.3% ಗೆ ಹೋಲಿಸಿದರೆ ಫೆಬ್ರವರಿಯಲ್ಲಿ 8.66% ಕ್ಕೆ ಹೆಚ್ಚಳವಾಗಿದೆ.

SCROLL FOR NEXT