ಮುಂಬೈ: ಕಳೆದ 6 ದಿನಗಳಿಂದ ಕುಸಿತದ ಹಾದಿಯಲ್ಲಿ ಸಾಗಿದ್ದ ಭಾರತೀಯ ಷೇರುಮಾರುಕಟ್ಟೆ ಕೊನೆಗೂ ಇಂದು ತನ್ನ ಕುಸಿತಕ್ಕೆ ಬ್ರೇಕ್ ಹಾಕಿದ್ದು, ಹೂಡಿಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದೊಂದು ವಾರದಿಂದ ಕುಸಿತದ ಹಾದಿಯಲ್ಲಿ ಸಾಗಿದ್ದ ಭಾರತೀಯ ಷೇರುಮಾರುಕಟ್ಟೆ ವಾರದ ಆರಂಭಿಕ ದಿನ ಸೋಮವಾರವೂ ಕುಸಿತಕಂಡಿತ್ತು. ಆದರೆ ಇಂದು ಸತತ ಆರು ದಿನಗಳ ಕುಸಿತಕ್ಕೆ ಬ್ರೇಕ್ ಬಿದ್ದಿದ್ದು, ಇಂದು ಸೆನ್ಸೆಕ್ಸ್ 584.81 ಅಂಕಗಳ ಏರಿಕೆಯೊಂದಿಗೆ, 81,634.81 ಅಂಕಗಳಿಗೆ ಏರಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಅಂತೆಯೇ ನಿಫ್ಟಿ ಕೂಡ 217.40 ಅಂಕಗಳ ಏರಿಕೆಯೊಂದಿಗೆ 25,013.15 ಅಂಕಗಳಿಗೆ ಏರಿ ವಹಿವಾಟು ಅಂತ್ಯಗೊಳಿಸಿದೆ.
ಕಳೆದೊಂದು ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕ ಕುಸಿತದಿಂದಾಗಿ ಭಾರತೀಯ ಹೂಡಿಕೆದಾರರು ಬರೊಬ್ಬರಿ 26 ಲಕ್ಷ ಕೋಟಿ ರೂ ನಷ್ಟ ಅನುಭವಿಸಿದ್ದರು. ಅಂತೆಯೇ ಬಾಂಬೇ ಸ್ಟಾಕ್ ಎಕ್ಸ್ ಚೇಂಜ್ ಲಿಸ್ಟೆಡ್ ಕಂಪನಿಗಳ ಹೂಡಿಕೆ ಮೊತ್ತ 452 ಲಕ್ಷ ಕೋಟಿಗೆ ಕುಸಿದಿತ್ತು.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇನ್ನು ಇಂದಿನ ವಹಿವಾಟಿನಲ್ಲಿ ನಿಫ್ಟಿಯ ಲಿಸ್ಟೆಡ್ ಸಂಸ್ಥೆಗಳಾದ ಟ್ರೆಂಟ್, ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್, ಭಾರತ್ ಎಲೆಕ್ಟ್ರಾನಿಕ್ಸ್, ಎಂ & ಎಂ ಸಂಸ್ಥೆಗಳು ಲಾಭಾಂಶಗಳಿಸಿವೆ. ಅಂತೆಯೇ ಟಾಟಾ ಸ್ಟೀಲ್, ಎಸ್‌ಬಿಐ ಲೈಫ್ ಇನ್ಶೂರೆನ್ಸ್, ಟೈಟನ್ ಕಂಪನಿ, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಬಜಾಜ್ ಫಿನ್‌ಸರ್ವ್ ಸಂಸ್ಥೆಗಳು ನಷ್ಟ ಅನುಭವಿಸಿದವು.
ಲೋಹವನ್ನು ಹೊರತುಪಡಿಸಿ, ಇತರ ಎಲ್ಲಾ ವಲಯದ ಸೂಚ್ಯಂಕಗಳು ಅಂದರೆ ಆಟೋ, ಬ್ಯಾಂಕ್, ಆರೋಗ್ಯ, ರಿಯಾಲ್ಟಿ, ಬಂಡವಾಳ ಸರಕುಗಳು, ವಿದ್ಯುತ್, ಟೆಲಿಕಾಂ, ಮಾಧ್ಯಮ ವಲಯದ ಷೇರುಗಳ ಮೌಲ್ಯ ಶೇಕಡಾ 1ರಿಂದ 2 ರಷ್ಟು ಏರಿಕೆಯಾಗಿದೆ.