ಮುಂಬೈ: ಭಾರತೀಯ ಷೇರುಮಾರುಕಟ್ಟೆ ಸತತ ಮೂರನೇ ದಿನವೂ ಕುಸಿತ ಅನುಭವಿಸಿದ್ದು, ಸೆನ್ಸೆಕ್ ಮತ್ತು ನಿಫ್ಟಿ ಸೂಚ್ಯಂಕಗಳು ಇಳಿಕೆಯಲ್ಲಿ ಗುರುವಾರ ದಿನದ ವಹಿವಾಟು ಅಂತ್ಯಗೊಳಿಸಿವೆ.
ಇಂದು ಸೆನ್ಸೆಕ್ಸ್ 494.75 ಅಂಕಗಳ ಕುಸಿತದೊಂದಿಗೆ 81,006.61ಕ್ಕೆ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದ್ದು, ನಿಫ್ಟಿ ಕೂಡ 221.45 ಅಂಕಗಳಷ್ಟು ಕುಸಿದು 24,749.85 ಅಂಕಗಳಿಗೆ ಇಳಿಕೆಯಾಗಿದೆ.
ರಿಯಲ್ ಎಸ್ಟೇಟ್, ಆಟೋ ಮತ್ತು ಗ್ರಾಹಕ ವಿವೇಚನೆ ಮತ್ತು ಗ್ರಾಹಕ ಬಳಕ ವಲಯದ ಷೇರುಗಳ ಮಾರಾಟದ ತೀವ್ರ ಒತ್ತಡದಿಂದಾಗಿ ಇಂದಿನ ಮಾರುಕಟ್ಟೆ ಕುಸಿದಿದೆ ಎನ್ನಲಾಗಿದೆ.
ಇಂದಿನ ವಹಿವಾಟಿನಲ್ಲಿ ನೆಸ್ಲೆ ಸಂಸ್ಥೆಯ ಷೇರುಗಳು ಬರೊಬ್ಬರಿ ಶೇ.3ರಷ್ಟು ಕುಸಿದಿದ್ದು, ಅತೀದೊಡ್ಡ ನಷ್ಟ ಅನುಭವಿಸಿದ ಸಂಸ್ಥೆಯಾಗಿದೆ. ಉಳಿದಂತೆ ಎಫ್ ಎಂಸಿಜಿ ವಲಯದ ಷೇರುಗಳ ಮೌಲ್ಯ ಶೇ.094ರಷ್ಟು ಕುಸಿದಿದೆ.
ಇದಲ್ಲದೆ ಮಹೀಂದ್ರಾ ಮತ್ತು ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫಿನ್‌ಸರ್ವ್, ಟೈಟಾನ್, ಮಾರುತಿ, ಆಕ್ಸಿಸ್ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಸಂಸ್ಥೆಗಳು ನಷ್ಟ ಅನುಭವಿಸಿವೆ. ಅಂತೆಯೇ ಟೆಕ್ ಮಹೀಂದ್ರಾ, ಇನ್ಫೋಸಿಸ್, ಪವರ್ ಗ್ರಿಡ್, ಲಾರ್ಸೆನ್ ಮತ್ತು ಟೂಬ್ರೊ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಗಳ ಷೇರುಗಳು ಲಾಭಾಂಶ ಕಂಡಿವೆ.