ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲೇ ದೇಶದ ಅತೀ ದೊಡ್ಡ ಬ್ಯಾಂಕ್ ಎಸ್ ಬಿಐ (State Bank of India) ಭಾರಿ ಪ್ರಮಾಣದ ನಿವ್ವಳ ಲಾಭಾಂಶ ಕಂಡಿದೆ.
ಹೌದು.. ಪ್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಬರೊಬ್ಬರಿ 19 ಸಾವಿರ ಕೋಟಿ ನಿವ್ವಳ ಲಾಭ ಗಳಿಸಿದೆ. ಈ ಕುರಿತು ಇಂದು ಬಿಡುಗಡೆಯಾದ ಸಂಸ್ಥೆಯ ಮೊದಲ ತ್ರೈಮಾಸಿಕ ವರದಿಯಲ್ಲಿ ಮಾಹಿತಿ ನೀಡಲಾಗಿದ್ದು, ಸಂಸ್ಥೆ ಶೇ.12 ರಷ್ಟು ಅಂದರೆ 19, 160 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಹೇಳಲಾಗಿದೆ.
ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 17,035 ಕೋಟಿ ರೂ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಶೇ 12ರಷ್ಟು ಹೆಚ್ಚಳವಾಗಿದೆ ಎಂದು ಬ್ಯಾಂಕ್ ಷೇರುಪೇಟೆಗೆ ಶುಕ್ರವಾರ ತಿಳಿಸಿದೆ. ಕಳೆದ ಜೂನ್ ತ್ರೈಮಾಸಿಕದಲ್ಲಿ ಒಟ್ಟು 1,22,688 ಕೋಟಿ ರೂ ವರಮಾನ ಗಳಿಸಿತ್ತು.
ಈ ಬಾರಿ 1,35,342 ಕೋಟಿ ಗಳಿಸಿದೆ. ಬಡ್ಡಿ ಮೂಲಕ 1,17,996 ಕೋಟಿ ಗಳಿಸಲಾಗಿದೆ. ಕಾರ್ಯಾಚರಣೆ ಲಾಭ 30,544 ಕೋಟಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಒಟ್ಟು ವಸೂಲಾಗದ ಸಾಲದ ಪ್ರಮಾಣವು (ಜಿಎನ್‌ಪಿಎ) ಶೇ 1.83ಕ್ಕೆ ಇಳಿದಿದ್ದು, ನಿವ್ವಳ ಎನ್‌ಪಿಎ ಶೇ 0.57ರಿಂದ ಶೇ 0.47ಕ್ಕೆ ಇಳಿಕೆಯಾಗಿದೆ. ಅಂತೆಯೇ ಬ್ಯಾಂಕ್‌ನ ಸಮರ್ಪಕ ಬಂಡವಾಳ ಅನುಪಾತವು (ಸಿಎಆರ್) ಶೇ 13.86ರಿಂದ ಶೇ 14.63ಕ್ಕೆ ಏರಿಕೆಯಾಗಿದೆ ಎಂದು ಸಂಸ್ಥೆ ತನ್ನ ಮೊದಲ ತ್ರೈಮಾಸಿಕ ವರದಿಯಲ್ಲಿ ತಿಳಿಸಿದೆ.
ಈ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಎಸ್ ಬಿಐ ಬ್ಯಾಂಕ್‌ನ ಅಧ್ಯಕ್ಷ ಸಿ.ಎಸ್.ಸೆಟ್ಟಿ, 'ಅಮೆರಿಕದ ಸುಂಕ ಅನಿಶ್ಚಿತತೆಯ ನಡುವೆಯೂ ಬ್ಯಾಂಕ್‌ನ ಕಾರ್ಪೊರೇಟ್ ಸಾಲ ನೀಡಿಕೆ ಪ್ರಮಾಣವು ಎರಡಂಕಿ ಬೆಳವಣಿಗೆ ದಾಖಲಿಸುವ ವಿಶ್ವಾಸವನ್ನು ಹೊಂದಲಾಗಿದೆ.
ಅಮೆರಿಕದ ಸುಂಕದಿಂದ ವ್ಯವಹಾರದ ಮೇಲೆ ನೇರ ಪರಿಣಾಮ ಕಡಿಮೆ ಇರಲಿದೆ. ಅನಿಶ್ಚಿತತೆಯು ವ್ಯವಹಾರಗಳನ್ನು ನಿಧಾನಗೊಳಿಸಬಹುದು, ಇದು ಹೂಡಿಕೆ ನಿರ್ಧಾರಗಳನ್ನು ವಿಳಂಬಗೊಳಿಸಬಹುದು. ಆದರೂ, ಈ ಆರ್ಥಿಕ ವರ್ಷದಲ್ಲಿ ಕಾರ್ಪೊರೇಟ್ ಸಾಲ ನೀಡಿಕೆ ಪ್ರಮಾಣ ಶೇ 10ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.