ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಪ್ರೇಮಿಗಳಿಗೆ ಶಾಕ್ ನೀಡಿರುವ ಖ್ಯಾತ ಟ್ರಾವೆಲ್ ಬುಕಿಂಗ್ ಕಂಪನಿ ಓಯೋ, ತನ್ನ ಚೆಕ್ ಇನ್ ನಿಯಮ ಬದಲಿಸಿದ್ದು ಅವಿವಾಹಿತರಿಗೆ ರೂಮ್ ನೀಡಲ್ಲ ಎಂದು ಹೇಳಿದೆ.
ಹೌದು.. ತನ್ನ ಸಂಗಾತಿಯೊಂದಿಗೆ ಆತ್ಮೀಯ ಖಾಸಗಿ ಸಮಯ ಕಳೆಯಲು ಮೊದಲ ಆಯ್ಕೆಯಾಗಿದ್ದ ಓಯೋ ಇದೀಗ ತನ್ನ 'ನೆಚ್ಚಿನ ಗ್ರಾಹಕ'ರಿಗೆ ಶಾಕ್ ನೀಡಿದ್ದು, ಇನ್ನು ಮುಂದೆ ಅವಿವಾಹಿತ ಜೋಡಿಗಳಿಗೆ ತನ್ನ ಹೋಟೆಲ್ ರೂಮ್ಗಳನ್ನು ಬಾಡಿಗೆ ನೀಡುವುದಿಲ್ಲ ಎಂದು ಹೇಳಿದೆ.
ತನ್ನ ಪಾಲುದಾರ ಹೋಟೆಲ್‌ಗಳಿಗಾಗಿ ಹೊಸ ಚೆಕ್ ಇನ್ ಮಾರ್ಗಸೂಚಿಗಳನ್ನು ಹೊರಡಿಸಿರುವ ಓಯೋ, ಮೊದಲಿಗೆ ಮೀರತ್ನಿಂದ ಇವುಗಳನ್ನು ಜಾರಿಗೊಳಿಸಲು ಆರಂಭಿಸಿದೆ. ಪರಿಷ್ಕೃತ ನೀತಿಯ ಅಡಿಯಲ್ಲಿ, ಪುರುಷ ಮತ್ತು ಮಹಿಳಾ ಜೋಡಿಗಳು ಆನ್‌ಲೈನ್ ಬುಕಿಂಗ್ ಮಾಡುವಾಗ ಅಥವಾ ಚೆಕ್ ಇನ್ ಮಾಡುವಾಗ ಅವರು ತಮ್ಮ ಮಧ್ಯದ ಸಂಬಂಧವನ್ನು ತೋರಿಸುವ ಪುರಾವೆಗಳನ್ನು ನೀಡುವುದು ಕಡ್ಡಾಯವಾಗಲಿದೆ.
ಸ್ಥಳೀಯ ಸಾಮಾಜಿಕ ಪರಿಸ್ಥಿತಿಗಳನ್ನು ನೋಡಿಕೊಂಡು ಪಾಲುದಾರ ಹೋಟೆಲ್‌ಗಳು ಸಂಗಾತಿಗಳಿಗೆ ರೂಮ್ ನೀಡುವ ಅಥವಾ ನೀಡದಿರುವ ಬಗ್ಗೆ ವಿವೇಚನೆಯಿಂದ ನಿರ್ಧರಿಸಬಹುದು ಎಂದು ಕಂಪನಿ ತಿಳಿಸಿದೆ.
ಹೊಸ ನಿಯಮಗಳನ್ನು ತಕ್ಷಣದಿಂದ ಜಾರಿಗೆ ತರುವಂತೆ ಓಯೋ ಮೀರತ್‌ನಲ್ಲಿರುವ ತನ್ನ ಪಾಲುದಾರ ಹೋಟೆಲ್ಗಳಿಗೆ ನಿರ್ದೇಶನ ನೀಡಿದೆ. ವಾಸ್ತವ ಸ್ಥಿತಿಗತಿಗಳ ಆಧಾರದ ಮೇಲೆ ಕಂಪನಿಯು ಇದನ್ನು ಮತ್ತಷ್ಟು ನಗರಗಳಿಗೆ ವಿಸ್ತರಿಸಬಹುದು ಎಂದು ಮೂಲಗಳು ತಿಳಿಸಿವೆ.
ದೇಶದ ಪ್ರಮುಖ ಲಾಡ್ಜ್ ಬುಕ್ಕಿಂಗ್ ಕಂಪನಿಗಳಲ್ಲಿ ಓಯೋ ಕೂಡ ಒಂದಾಗಿದೆ. ದೇಶದ ಎಲ್ಲಾ ನಗರಗಳಲ್ಲಿಯೂ ತನ್ನ ಹೋಟಲ್ ಬುಕ್ಕಿಂಗ್ ಜಾಲವನ್ನು ವಿಸ್ತರಣೆ ಮಾಡಿಕೊಂಡಿದೆ. ಕಡಿಮೆ ದರ, ಗುಣಮಟ್ಟದ ಸೇವೆ, ದೊಡ್ಡ ಜಾಲದಿಂದ ಈ ಓಯೋ ಹೋಟೆಲ್‌ಗಳು ಹೆಸರುವಾಸಿಯಾಗಿವೆ. ಅದರಲ್ಲೂ ಅವಿವಾಹಿತರಿಗೆ ಹೋಟೆಲ್ ಚೆಕ್‌ಇನ್‌ಗೆ ಅವಕಾಶ ನೀಡುವ ಕಾರಣಕ್ಕೆ ಈ ಹೋಟೆಲ್ ಗ್ರಾಹಕರ ನೆಚ್ಚಿನ ಆಯ್ಕೆಯಾಗಿತ್ತು. ಇದೀಗ ಅವಿವಾಹಿತರಿಗೆ ನಿರ್ಬಂಧ ವಿಧಿಸಿ ಹೊಸ ನಿಯಮ ಜಾರಿಗೊಳಿಸಿದೆ.
ಐಡಿ ಪ್ರೂಫ್ ಕಡ್ಡಾಯ
ಹೊಸ ನಿಯಮದ ಪ್ರಕಾರ, ಹೊಟೇಲ್‌ಗೆ ಬರುವ ಜೋಡಿಗಳು ಕಡ್ಡಾಯವಾಗಿ ತಮ್ಮ ಸಂಬಂಧದ ದಾಖಲೆ ತರುವುದು ಕಡ್ಡಾಯವಾಗಿದೆ. ಆನ್‌ಲೈನ್ ಬುಕ್ಕಿಂಗ್‌ಗೂ ಕೂಡಾ ಇದು ಕಡ್ಡಾಯವಾಗಿದೆ. ಬೇರೆ ನಗರಗಳಿಗೂ ಇದೆ ನಿಯಮ ವಿಸ್ತರಿಸುವ ಬಗ್ಗೆ ಯೋಚನೆ ಮಾಡಲಾಗುವುದು. ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ಪದ್ಧತಿಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ ಎಂದು ಓಯೋ ಉತ್ತರ ಭಾರತ ಪ್ರಾದೇಶಿಕ ಮುಖ್ಯಸ್ಥ ತಿಳಿಸಿದ್ದಾರೆ.
ಪೊಲೀಸರು ಮತ್ತು ಹೋಟೆಲ್ ಪಾಲುದಾರರೊಂದಿಗೆ ಸುರಕ್ಷಿತ ಆತಿಥ್ಯ ಕುರಿತು ಜಂಟಿ ಸೆಮಿನಾರ್ ಏರ್ಪಡಿಸುವುದು, ಅನೈತಿಕ ಚಟುವಟಿಕೆಗಳನ್ನು ಉತ್ತೇಜಿಸುವ ಹೋಟೆಲ್ಗಳನ್ನು ಕಪ್ಪುಪಟ್ಟಿಗೆ ಸೇರಿಸುವುದು ಮತ್ತು ಓಯೋ ಬ್ರ್ಯಾಂಡಿಂಗ್ ಬಳಸುವ ಅನಧಿಕೃತ ಹೋಟೆಲ್ಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಅಖಿಲ ಭಾರತ ಮಟ್ಟದಲ್ಲಿ ಓಯೋ ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದೆ.