ನವದೆಹಲಿ: ಕಳೆದ ದಶಕದಿಂದ ಭಾರತದಲ್ಲಿ ಜನರ ವಸ್ತುಗಳ ಬಳಕೆಯ ಮಾದರಿಯ, ಜೀವನಶೈಲಿ ಸಾಕಷ್ಟು ಬದಲಾಗಿದೆ, ಆಹಾರದ ಮೇಲಿನ ಜನರ ಮಾಸಿಕ ತಲಾ ವೆಚ್ಚದ ಪಾಲು ಶೇಕಡಾ 50ಕ್ಕಿಂತ ಕಡಿಮೆಯಾಗಿದೆ ಮತ್ತು ಹೆಚ್ಚಿನ ಭಾಗವು ಆಹಾರೇತರ ವಸ್ತುಗಳಿಗೆ ಹೋಗುತ್ತಿದೆ ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ.
2011-12 ಮತ್ತು 2023-24 ರ ಗೃಹಬಳಕೆ ವೆಚ್ಚ ಸಮೀಕ್ಷೆಗಳ ಅಂಕಿಅಂಶವನ್ನು ಹೋಲಿಸುವ ಅಧ್ಯಯನದ ಪ್ರಕಾರ, ಗೃಹಬಳಕೆಯ ವೆಚ್ಚ ಮೂಲಭೂತ ಅವಶ್ಯಕತೆಗಳಿಂದ ಗೃಹೋಪಯೋಗಿ ಉಪಕರಣಗಳಂತಹ ವಸ್ತುಗಳಿಗೆ ಜನರು ಹಣ ಖರ್ಚು ಮಾಡುವುದು ಹೆಚ್ಚಾಗಿದೆ.
ಆರ್ಥಿಕ ಸಲಹಾ ಮಂಡಳಿಯು ಪ್ರಧಾನ ಮಂತ್ರಿಗಳಿಗೆ ಬಿಡುಗಡೆ ಮಾಡಿದ ವರದಿಯಲ್ಲಿ ಇದು ಕಂಡುಬಂದಿದೆ. ಶೇಕಡಾ 40ಕ್ಕಿಂತ ಕಡಿಮೆ (B40) ಮತ್ತು ಶೇಕಡಾ 20ಕ್ಕಿಂತ ಹೆಚ್ಚು(T20) ಕುಟುಂಬಗಳ ನಡುವಿನ ಆಸ್ತಿ ಮಾಲೀಕತ್ವದ ಅಂತರವು ಕಡಿಮೆಯಾಗುತ್ತಿದೆ.
ಮಾಹಿತಿ, ಮನರಂಜನೆ ಮತ್ತು ಸಂವಹನಕ್ಕಾಗಿ ಮೊಬೈಲ್ ಫೋನ್‌ಗಳು ಜನರ ಮೂಲಭೂತ ಅವಶ್ಯಕತೆಯಾಗಿ ಬದಲಾಗುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳು ಮತ್ತು ಎಲ್ಲಾ ಗ್ರಾಹಕ ಗುಂಪುಗಳಲ್ಲಿ ಬಹುತೇಕರಲ್ಲಿ ಮೊಬೈಲ್ ಫೋನ್ ಗಳಿವೆ. ಶೇಕಡಾ 40ಕ್ಕಿಂತ ಕಡಿಮೆ ಗ್ರಾಮೀಣ ಕುಟುಂಬಗಳಲ್ಲಿ, ಮೊಬೈಲ್ ಫೋನ್ ಹೊಂದಿರುವವರು 2011-12ರಲ್ಲಿ 66.5% ರಿಂದ 2023-24ರಲ್ಲಿ 94.3% ಕ್ಕೆ ಏರಿಕೆಯಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಟಿವಿ ಹೊಂದಿರುವವರು 2011-12ರ ಸಮೀಕ್ಷೆಯಲ್ಲಿ ದಾಖಲಾದ 49.6% ರಿಂದ 2023-24ರಲ್ಲಿ 61.1% ಕ್ಕೆ ಏರಿಕೆಯಾಗಿದೆ. ಕುತೂಹಲಕಾರಿಯಾಗಿ, ನಗರ ಪ್ರದೇಶಗಳಲ್ಲಿ, ಟಿವಿ ಹೊಂದಿರುವವರು 80.4% ರಿಂದ 78.5% ಕ್ಕೆ ಇಳಿಕೆಯಾಗಿದೆ, ಟಿವಿಗಿಂತ ಜನರು ಮನರಂಜನೆ, ಮಾಹಿತಿಗಳನ್ನು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗಳ ಮುಖಾಂತರ ಪಡೆಯುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಅಧ್ಯಯನವು ಹೇಳುತ್ತದೆ.
ಗ್ರಾಮೀಣ ಮತ್ತು ನಗರ ಮನೆಗಳಲ್ಲಿ ಫ್ರಿಡ್ಝ್ ಹೊಂದಿರುವವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಶೇಕಡಾ 40ಕ್ಕಿಂತ ಕಡಿಮೆ ಮನೆಗಳು ಸೇರಿದಂತೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹವಾನಿಯಂತ್ರಣಗಳು/ಏರ್ ಕೂಲರ್‌ಗಳು ಮತ್ತು ವಾಷಿಂಗ್ ಮೆಷಿನ್ ಹೊಂದಿರುವವ ಸಂಖ್ಯೆ ಕೂಡ ಹೆಚ್ಚಾಗಿದೆ.