ನವದೆಹಲಿ: ಮಾಜಿ ಸೈನಿಕರು, ಸೈನಿಕರ ಪತ್ನಿಯರಿಗೆ ಮತ್ತು ಹುತಾತ್ಮ ಯೋಧರ ಪತ್ನಿಯರಿಗೆ ಕಂಪನಿಯಲ್ಲಿ ವೃತ್ತಿ ಅವಕಾಶಗಳನ್ನು ಸೃಷ್ಟಿಸಲು ಅಮೆಜಾನ್ ಇಂಡಿಯಾ ಸೋಮವಾರ ಸೇನಾ ಕಲ್ಯಾಣ ಉದ್ಯೋಗ ಸಂಸ್ಥೆ(AWPO)ಯೊಂದಿಗೆ ಕಾರ್ಯತಂತ್ರದ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ಅಮೆಜಾನ್ ಇಂಡಿಯಾ, AWPO ನೊಂದಿಗೆ ಒಡಂಬಡಿಕೆಗೆ(MoU) ಸಹಿ ಹಾಕಿದೆ.
ಈ ಒಪ್ಪಂದದ ಅಡಿಯಲ್ಲಿ, ಅಮೆಜಾನ್ ಇಂಡಿಯಾ ಉದ್ಯೋಗ ಅವಕಾಶಗಳಿಗಾಗಿ AWPO ನೊಂದಿಗೆ ಸಂಬಂಧಿತ ಉದ್ಯೋಗಾವಕಾಶಗಳನ್ನು ಹಂಚಿಕೊಳ್ಳುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಕಂಪನಿಯೊಳಗೆ ಲಭ್ಯವಿರುವ ಹುದ್ದೆಗಳು ಮತ್ತು ವೃತ್ತಿ ಪ್ರಗತಿಯ ಅವಕಾಶಗಳ ಮೂಲಕ ಸಂಭಾವ್ಯ ಅರ್ಜಿದಾರರಿಗೆ ಮಾರ್ಗದರ್ಶನ ನೀಡಲು ಅಮೆಜಾನ್ ವೆಬಿನಾರ್‌ಗಳು ಮತ್ತು ಕಾರ್ಯಾಗಾರಗಳು ಸೇರಿದಂತೆ ಜಾಗೃತಿ ಅಭಿಯಾನ ಸಹ ನಡೆಸುತ್ತದೆ.
"ಸೇನಾ ಕಲ್ಯಾಣ ಉದ್ಯೋಗ ಸಂಸ್ಥೆಯೊಂದಿಗಿನ ಈ ಪಾಲುದಾರಿಕೆಯು ಮಾಜಿ ಸೈನಿಕರು, ಸೈನಿಕರು ಸಂಗಾತಿಗಳಿಗೆ ಮತ್ತು ಯುದ್ಧಗಳಲ್ಲಿ ಹುತಾತ್ಮರಾದ ಯೋಧರ ಪತ್ನಿಯರಿಗೆ ನಮ್ಮ ಬೆಂಬಲ ಹೆಚ್ಚಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಅವರ ವಿಶಿಷ್ಟ ಸಾಮರ್ಥ್ಯ ಮತ್ತು ಅನುಭವಗಳನ್ನು ಬಳಸಿಕೊಳ್ಳುವ ಅರ್ಥಪೂರ್ಣ ವೃತ್ತಿ ಅವಕಾಶಗಳನ್ನು ಅವರಿಗೆ ಒದಗಿಸುತ್ತದೆ" ಎಂದು ಅಮೆಜಾನ್ ಸ್ಟೋರ್ಸ್ ಇಂಡಿಯಾ ಉಪಾಧ್ಯಕ್ಷೆ ದೀಪ್ತಿ ವರ್ಮಾ ಹೇಳಿದ್ದಾರೆ.