ಮುಂಬೈ: ಉದ್ಯಮಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ 1,021 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ಶನಿವಾರ ಹೊಸ ಆದೇಶ ಹೊರಡಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಹೊರಡಿಸಲಾದ ತಾತ್ಕಾಲಿಕ ಆದೇಶವು, ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಹೊಂದಿರುವ ರಿಲಯನ್ಸ್ ಪವರ್‌ನ ಈಕ್ವಿಟಿ ಷೇರುಗಳನ್ನು ಮತ್ತು ಸಸಾನ್ ಪವರ್ ಹಾಗೂ ರಿಲಯನ್ಸ್ ಪವರ್‌ನಿಂದ ಪಡೆಯಬಹುದಾದ ನಿರ್ದಿಷ್ಟ ಸಾಲದ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ ಎಂದು ತನಿಖಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್(ಆರ್‌ಎಚ್‌ಎಫ್‌ಎಲ್) ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್(ಆರ್‌ಸಿಎಫ್‌ಎಲ್) ವಿರುದ್ಧ ಸಿಬಿಐ ದಾಖಲಿಸಿದ್ದ ಎಫ್‌ಐಆರ್‌ನಿಂದ ಈ ತನಿಖೆ ಆರಂಭವಾಗಿದೆ.
ಇಡಿ ಪ್ರಕಾರ, ಆರ್‌ಎಚ್‌ಎಫ್‌ಎಲ್ ಮತ್ತು ಆರ್‌ಸಿಎಫ್‌ಎಲ್ ಸಂಗ್ರಹಿಸಿದ 15,548 ಕೋಟಿ ರೂ.ಗಳ ಸಾರ್ವಜನಿಕ ಹಣವನ್ನು ಅನಿಲ್ ಅಂಬಾನಿಯ ರಿಲಯನ್ಸ್ ಗ್ರೂಪ್ ನಿಯಂತ್ರಿಸುವ ಮತ್ತು ನಿರ್ವಹಿಸುವ "ಶೆಲ್"(ಡಮ್ಮಿ) ಮತ್ತು ಗ್ರೂಪ್ ಕಂಪನಿಗಳ ಜಾಲದ ಮೂಲಕ "ವ್ಯವಸ್ಥಿತವಾಗಿ ಡೈವರ್ಟ್ ಮಾಡಲಾಗಿದೆ" ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಈ ಆದೇಶದೊಂದಿಗೆ, ಪ್ರಕರಣದಲ್ಲಿ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ಒಟ್ಟು ಮೌಲ್ಯ 20,367 ಕೋಟಿ ರೂ.ಗಳಿಗೆ ತಲುಪಿದ್ದು, ಜಾರಿ ನಿರ್ದೇಶನಾಲಯ ನಾಲ್ಕು ಆರೋಪಪಟ್ಟಿಗಳನ್ನು ಸಲ್ಲಿಸಿದ್ದು, ಇಲ್ಲಿಯವರೆಗೆ ಎಂಟು ಜನರನ್ನು ಬಂಧಿಸಿದೆ.
ಇದಲ್ಲದೆ, ಫೆಮಾ ಅಡಿಯಲ್ಲಿ 77.86 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.