ನವದೆಹಲಿ: ಚಿನ್ನಾಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್. ಈ ವರ್ಷದ ಆರಂಭದಲ್ಲಿ ಸಾರ್ವಕಾಲಿಕ ದಾಖಲೆ ಬರೆದು ಗಗನಕ್ಕೇರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇದೀಗ ಊಹೆಗೂ ಮೀರಿ ಪಾತಾಳಕ್ಕೆ ಕುಸಿದಿವೆ. 10 ಗ್ರಾಂ ಅಪರಂಜಿ ಚಿನ್ನದ ದರ ತನ್ನ ಗರಿಷ್ಠ ಮಟ್ಟವಾದ ₹1.81 ಲಕ್ಷದಿಂದ ಬರೋಬ್ಬರಿ ಶೇ. 30ಕ್ಕೂ ಹೆಚ್ಚು ಕುಸಿದು ₹1.25 ಲಕ್ಷಕ್ಕೆ ತಲುಪಿದೆ.
ಬೆಳ್ಳಿ ಬೆಲೆ ಕೂಡ ಪ್ರತಿ ಕೆಜಿಗೆ ₹4 ಲಕ್ಷದಿಂದ ಶೇ. 60 ರಷ್ಟು ಪತನಗೊಂಡು ₹1.80 ಲಕ್ಷಕ್ಕೆ ಬಂದು ನಿಂತಿದೆ. ಜೀವಿತಾವಧಿಯ ಗರಿಷ್ಠ ಮಟ್ಟದಲ್ಲಿ ಚಿನ್ನಾಭರಣ ಖರೀದಿಸಿದ್ದ ಹೂಡಿಕೆದಾರರಿಗೆ ಬೆಲೆ ಕುಸಿತವು ತೀವ್ರ ಆತಂಕ ಮೂಡಿಸಿದೆ.
ಚಿನ್ನ ಖರೀದಿದಾರರಿಗೆ ಕೊಂಚ ರಿಲೀಫ್ ಶುಕ್ರವಾರದಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದ್ದು, ಚಿನ್ನ ಖರೀದಿದಾರರಿಗೆ ಕೊಂಚ ರಿಲೀಫ್ ಸಿಕ್ಕಿದೆ. 24 ಕ್ಯಾರೆಟ್ ಚಿನ್ನದ ದರವು ಪ್ರತಿ 10 ಗ್ರಾಂಗೆ ₹5,120 ರಷ್ಟು ಕಡಿಮೆಯಾಗಿದೆ. ಈ ಇಳಿಕೆಯಿಂದಾಗಿ, ಚಿಲ್ಲರೆ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ₹1,25,570 ಕ್ಕೆ ತಲುಪಿದೆ. ಇದರೊಂದಿಗೆ ಬೆಳ್ಳಿಯ ಬೆಲೆಯೂ ಕೂಡ ಕಡಿಮೆಯಾಗಿದೆ. ಇತ್ತೀಚಿನ ವರದಿ ಪ್ರಕಾರ, 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹1,15,100 ರಷ್ಟಿದೆ. ಬೆಳ್ಳಿಯ ಬೆಲೆಯು ಪ್ರತಿ 100 ಗ್ರಾಂಗೆ ₹500 ರಷ್ಟು ಇಳಿಕೆಯಾಗಿದ್ದು, ಈಗ ಅದೇ ಪ್ರಮಾಣದ ಬೆಳ್ಳಿಯ ಬೆಲೆ ₹17,500 ರಷ್ಟಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಡಾಲರ್ ಆಧಾರದಲ್ಲಿ ನಿಗದಿಯಾಗುತ್ತದೆ. ಡಾಲರ್ ಬಲಿಷ್ಠವಾದಾಗ ಚಿನ್ನದ ಬೆಲೆ ಇತರ ಕರೆನ್ಸಿಗಳಲ್ಲಿ ಖರೀದಿಸುವವರಿಗೆ ದುಬಾರಿಯಾಗುತ್ತದೆ. ಇದರಿಂದ ಬೇಡಿಕೆ ಕುಸಿಯುವ ಸಾಧ್ಯತೆ ಹೆಚ್ಚುತ್ತದೆ. ಡಾಲರ್ ಬಲಗೊಳ್ಳುತ್ತಿರುವುದರಿಂದ ಚಿನ್ನದ ಮೇಲೆ ಮಾರಾಟದ ಒತ್ತಡ ಹೆಚ್ಚಾಗಿದೆ. ಇನ್ನು ಚಿನ್ನದ ಜೊತೆ ಬೆಳ್ಳಿಯೂ ಕುಸಿತದ ಹಾದಿಯಲ್ಲಿದೆ. ನವೆಂಬರ್ 20 ರಂದು ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ಸುಮಾರು 10 ಸಾವಿರದ 614 ರೂಪಾಯಿ ಕುಸಿತ ಕಂಡಿದೆ. ಈಗ ಕೆಜಿ ಬೆಳ್ಳಿ 1 ಲಕ್ಷದ 75 ಸಾವಿರ ರೂಪಾಯಿಯ ಮಟ್ಟಕ್ಕೆ ಬಂದಿದೆ.
ಬೆಂಗಳೂರಲ್ಲಿ ಚಿನ್ನ - ಬೆಳ್ಳಿ ಬೆಲೆಗಳು: 24 ಕ್ಯಾರಟ್ ಚಿನ್ನದ ಬೆಲೆ: ಇಂದು ಶುಕ್ರವಾರ ಪ್ರತಿ 10 ಗ್ರಾಂಗೆ ಬರೋಬ್ಬರಿ ₹5120 ಇಳಿಕೆಯಾಗಿದ್ದು, ₹1,25,570ರಲ್ಲಿ ಮಾರಾಟವಾಗುತ್ತಿದೆ.
22 ಕ್ಯಾರಟ್ ಚಿನ್ನದ ಬೆಲೆ: ಪ್ರತಿ 10 ಗ್ರಾಂಗೆ ₹4700 ರಷ್ಟು ಇಳಿಕೆಯಾಗಿದ್ದು, ₹1,15,100 ರಲ್ಲಿ ಮಾರಾಟವಾಗುತ್ತಿದೆ.
ಬೆಳ್ಳಿ ಬೆಲೆ: ಬೆಳ್ಳಿ ಬೆಲೆ ಕೂಡ ಪ್ರತಿ ಕೆಜಿಗೆ ₹5000 ಇಳಿಕೆಯಾಗಿದ್ದು, ₹1.75 ಲಕ್ಷದಂತೆ ಮಾರಾಟವಾಗುತ್ತಿದೆ.
ಬೆಲೆ ಕುಸಿತಕ್ಕೆ ಕಾರಣಗಳೇನು? ಚಿನ್ನ ಮತ್ತು ಬೆಳ್ಳಿ ಬೆಲೆಗಳ ಈ ತೀವ್ರ ಪತನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಹಲವು ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಬೆಳವಣಿಗೆಗಳು ಕಾರಣವಾಗಿವೆ.
ಕಚ್ಚಾ ತೈಲ ಮತ್ತು ಹಣದುಬ್ಬರ ಭೀತಿ: ಅಮೆರಿಕ ಮತ್ತು ಇರಾನ್ ನಡುವೆ ಉಂಟಾದ ಯುದ್ಧದ ವಾತಾವರಣದಿಂದಾಗಿ ಕಚ್ಚಾ ತೈಲ (Crude Oil) ಬೆಲೆ ಬ್ಯಾರೆಲ್‌ಗೆ 120 ಡಾಲರ್ ದಾಟಿದೆ. ಇದು ಜಾಗತಿಕವಾಗಿ ಮತ್ತೆ ಹಣದುಬ್ಬರದ ಭೀತಿಯನ್ನು ಹುಟ್ಟುಹಾಕಿದೆ. ಹಣದುಬ್ಬರವನ್ನು ನಿಯಂತ್ರಿಸಲು ಅಮೆರಿಕದ ಫೆಡರಲ್ ರಿಸರ್ವ್ (US Fed) 2023 ರ ನಂತರ ಮೊದಲ ಬಾರಿಗೆ ಬಡ್ಡಿದರಗಳನ್ನು ಹೆಚ್ಚಿಸಿರುವುದು ಮಾರುಕಟ್ಟೆಯ ದಿಕ್ಕನ್ನೇ ಬದಲಿಸಿದೆ. ಡಿಸೆಂಬರ್‌ನಲ್ಲಿ ಯುಎಸ್ ಫೆಡ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತೆ ಬಡ್ಡಿದರ ಏರಿಸಬಹುದು ಎಂಬ ನಿರೀಕ್ಷೆಯೂ ಇದೆ.
46 ವರ್ಷಗಳ ಇತಿಹಾಸದಲ್ಲೇ ಅತ್ಯಂತ ತೀವ್ರ ಕುಸಿತ: ಪ್ರಮುಖ ಸಂಸ್ಥೆಯಾದ 'ಫಂಡ್ಸ್ ಇಂಡಿಯಾ ರಿಸರ್ಚ್' ವರದಿಯ ಪ್ರಕಾರ, 2026 ರ ಅಕ್ಟೋಬರ್ 31 ರ ವೇಳೆಗೆ ಚಿನ್ನದ ಬೆಲೆ ತನ್ನ ಗರಿಷ್ಠ ಮಟ್ಟದಿಂದ ಶೇ. 25 ರಷ್ಟು ಇಳಿಕೆಯಾಗಿದೆ. 1980 ರಿಂದ ಇಲ್ಲಿಯವರೆಗಿನ 46 ವರ್ಷಗಳ ಐತಿಹಾಸಿಕ ಅಂಕಿಅಂಶಗಳನ್ನು ಗಮನಿಸಿದರೆ, ಇದು ಅತ್ಯಂತ ತೀವ್ರವಾದ ಕುಸಿತಗಳಲ್ಲಿ ಒಂದಾಗಿದೆ. ಈ ಮಧ್ಯೆ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ₹1 ಲಕ್ಷದ ಗಡಿಗಿಂತ ಕೆಳಗಿಳಿಯಲಿದೆಯೇ ಎಂಬ ಚರ್ಚೆ ಈಗ ಜೋರಾಗಿದೆ.