Indian Stock Market; ಒಂದೇ ದಿನ ಸೆನ್ಸೆಕ್ಸ್ 1,484 ಅಂಕ ಕುಸಿತ, ಹೂಡಿಕೆದಾರರಿಗೆ ₹5 ಲಕ್ಷ ಕೋಟಿ ನಷ್ಟ! ಷೇರುಪೇಟೆಯ ದಿಢೀರ್ ಕುಸಿತಕ್ಕೆ ಕಾರಣವೇನು?
ಸೆನ್ಸೆಕ್ಸ್ ಇಂದು ಬರೊಬ್ಬರಿ 1,483.72 ಅಂಕಗಳ ಕುಸಿತದೊಂದಿಗೆ 82,435.99 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ 450.95 ಅಂಕಗಳ ಇಳಿಕೆಯೊಂದಿಗೆ 25,349.65 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಮುಂಬೈ: ವಾರದ ಮೊದಲ ದಿನವೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಭಾರಿ ಕುಸಿತವಾಗಿದ್ದು, ಷೇರುಮಾರುಕಟ್ಟೆ ಉಭಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿವೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.1.77ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.1.75ರಷ್ಟು ಕುಸಿತ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 1,483.72 ಅಂಕಗಳ ಕುಸಿತದೊಂದಿಗೆ 82,435.99 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ 450.95 ಅಂಕಗಳ ಇಳಿಕೆಯೊಂದಿಗೆ 25,349.65 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಕಳೆದ ಎರಡು ದಿನಗಳಿಂದ ಚೇತರಿಕೆಯ ಹಾದಿಯಲ್ಲಿದ್ದ ಭಾರತೀಯ ಷೇರುಪೇಟೆ ಸೋಮವಾರ ಭಾರೀ ಕುಸಿತ ಕಂಡಿದೆ. ಬ್ಯಾಂಕಿಂಗ್ ಮತ್ತು ಲೋಹ ವಲಯದ ಷೇರುಗಳಲ್ಲಿನ ಮಾರಾಟದ ಒತ್ತಡ ಹಾಗೂ ಹೂಡಿಕೆದಾರರು ಲಾಭದ ಹಣವನ್ನು ಹಿಂಪಡೆದ ಪರಿಣಾಮ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ತೀವ್ರವಾಗಿ ಕುಸಿದಿವೆ ಎನ್ನಲಾಗಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಟಾಟಾ ಸ್ಟೀಲ್, ಎಪಿಎಲ್ ಅಪೊಲೊ ಟ್ಯೂಬ್ಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಎಸ್‌ಬಿಐ, ಕೋಟಕ್ ಮಹೀಂದ್ರಾ ಬ್ಯಾಂಕ್ ಸಂಸ್ಥೆಗಳ ಷೇರುಗಳ ಮೌಲ್ಯ ಕುಸಿದಿದೆ. ಉಳಿದಂತೆ ಟಿಸಿಎಸ್, ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್, ಟೈಟನ್, ಐಟಿಸಿ ಮತ್ತು ಇನ್ಫೋಸಿಸ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿವೆ.
ಟಾಟಾ ಸ್ಟೀಲ್ ಷೇರು ಶೇ.8.16 ಕುಸಿತ
ಸೆನ್ಸೆಕ್ಸ್‌ನ ಪ್ರಮುಖ ಷೇರುಗಳ ಪೈಕಿ ಟಾಟಾ ಸ್ಟೀಲ್ ಅತಿ ಹೆಚ್ಚು ನಷ್ಟ ಅನುಭವಿಸಿತು. ಎಪಿಎಲ್ ಅಪೊಲೊ ಟ್ಯೂಬ್ಸ್ ಕಂಪನಿಯ ಶೇ.26.6ರಷ್ಟು ಪ್ರವರ್ತಕರ ಪಾಲನ್ನು 15,510 ಕೋಟಿ ರೂ.ಗೆ ಖರೀದಿಸಲು ಒಪ್ಪಂದ ಮಾಡಿಕೊಂಡಿರುವುದಾಗಿ ಟಾಟಾ ಸ್ಟೀಲ್ ತಿಳಿಸಿದೆ.
ಅಲ್ಲದೆ, ಇದೇ ಕಂಪನಿಯ ಮತ್ತಷ್ಟು ಶೇ.26ರಷ್ಟು ಪಾಲನ್ನು ಖರೀದಿಸಲು 16,756 ಕೋಟಿ ರೂ. ಮೊತ್ತದ ಮುಕ್ತ ಕೊಡುಗೆ (ಓಪನ್ ಆಫರ್) ನೀಡಲು ಉದ್ದೇಶಿಸಿದೆ. ಈ ಒಪ್ಪಂದದಿಂದ ಟಾಟಾ ಸ್ಟೀಲ್‌ನ ಪೈಪ್ ಮತ್ತು ಟ್ಯೂಬ್ ಉತ್ಪಾದನಾ ಸಾಮರ್ಥ್ಯ ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಬೆಳವಣಿಗೆಯ ನಡುವೆಯೂ ಕಂಪನಿಯ ಷೇರು ಶೇ.8.16ರಷ್ಟು ಕುಸಿದಿದೆ.
ಇನ್ನು ಆಕ್ಸಿಸ್ ಬ್ಯಾಂಕ್ ಶೇ.3.95, ಐಸಿಐಸಿಐ ಬ್ಯಾಂಕ್ ಶೇ.3.39, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.3.22, ಎಸ್‌ಬಿಐ ಶೇ.2.91 ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್ ಶೇ.2.52ರಷ್ಟು ಕುಸಿತ ದಾಖಲಿಸಿವೆ.
ಹೂಡಿಕೆದಾರರಿಗೆ 5 ಲಕ್ಷ ಕೋಟಿ ರೂ ನಷ್ಟ
ಇನ್ನು ಇಂದಿನ ವಹಿವಾಟಿನಲ್ಲಿ ಹೂಡಿಕೆದಾರರ ಬರೊಬ್ಬರಿ 5 ಲಕ್ಷ ಕೋಟಿ ರೂ ನಷ್ಟವಾಗಿದೆ. ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್‌ನ ಎಲ್ಲ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ 5,14,18,275 ಕೋಟಿ ರೂ.ಗಳಷ್ಟಿತ್ತು. ಆದರೆ ಸೋಮವಾರದ ವಹಿವಾಟಿನ ಅಂತ್ಯಕ್ಕೆ ಇದು 5,08,93,997 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ. ಅಂದರೆ ಒಂದೇ ದಿನದಲ್ಲಿ ಹೂಡಿಕೆದಾರರ ಸಂಪತ್ತು 5 ಲಕ್ಷ ಕೋಟಿ ರೂ.ಗೂ ಅಧಿಕ ಕರಗಿದೆ.
ಕುಸಿತಕ್ಕೆ ಕಾರಣವೇನು?
ನಾಲ್ಕು ವಾರಗಳ ಸತತ ಏರಿಕೆ, ಬ್ಯಾಂಕ್ ನಿಫ್ಟಿ ಇತ್ತೀಚೆಗೆ ದಾಖಲಿಸಿದ್ದ ಗರಿಷ್ಠ ಮಟ್ಟ ಹಾಗೂ ನಿಫ್ಟಿ 26,000ರ ಗಡಿ ಸಮೀಪಿಸಿದ್ದರಿಂದ ಹೂಡಿಕೆದಾರರು ಲಾಭದ ಹಣವನ್ನು ಹಿಂಪಡೆಯಲು ಮುಂದಾಗಿದ್ದಾರೆ. ಪರಿಣಾಮ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ಲೋಹ ವಲಯದ ಷೇರುಗಳಲ್ಲಿ ಹೆಚ್ಚಿನ ಮಾರಾಟ ಕಂಡುಬಂದಿದೆ ಎಂದು ಎನ್‌ರಿಚ್ ಮನಿ ಸಂಸ್ಥೆಯ ಸಿಇಒ ಪೊನ್ಮುಡಿ ಆರ್. ತಿಳಿಸಿದ್ದಾರೆ.
ಏಷ್ಯಾದ ಮಾರುಕಟ್ಟೆಗಳಲ್ಲಿಯೂ ಮಿಶ್ರ ವಹಿವಾಟು ಕಂಡುಬಂದಿದೆ. ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕ ಶೇ.3.31ರಷ್ಟು ಕುಸಿದಿದೆ. ಶಾಂಘೈ ಷೇರುಪೇಟೆಯ ಎಸ್‌ಎಸ್‌ಇ ಕಾಂಪೋಸಿಟ್ ಸೂಚ್ಯಂಕ ಬಹುತೇಕ ಸ್ಥಿರವಾಗಿದ್ದರೆ, ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಅಲ್ಪ ಕುಸಿತ ದಾಖಲಿಸಿದೆ. ಯುರೋಪ್‌ನ ಪ್ರಮುಖ ಷೇರುಪೇಟೆಗಳು ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿದ್ದವು.
ಕಳೆದ ಶುಕ್ರವಾರ ಅಮೆರಿಕದ ಷೇರುಪೇಟೆಯೂ ಭಾರೀ ಕುಸಿತ ಕಂಡಿತ್ತು. ನಾಸ್ಡಾಕ್ ಶೇ.5.28, ಎಸ್ ಆ್ಯಂಡ್ ಪಿ 500 ಶೇ.3.70 ಹಾಗೂ ಡೌ ಜೋನ್ಸ್ ಶೇ.1.93ರಷ್ಟು ಇಳಿಕೆಯಾಗಿದ್ದವು. ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.0.68ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 91.94 ಡಾಲರ್‌ಗೆ ತಲುಪಿದೆ. ಇದೇ ವೇಳೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ ಭಾರತೀಯ ಷೇರುಪೇಟೆಯಲ್ಲಿ 10,308.42 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದರು.