ಭಾರತದ ಉಪಗ್ರಹ ಸಂವಹನ ಕ್ಷೇತ್ರದಲ್ಲಿ ಎಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಸೇರಿದಂತೆ ಎಲ್ಲ ಕಂಪನಿಗಳ ಸ್ಪರ್ಧೆಯನ್ನು ಸ್ವಾಗತಿಸುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ (RIL) ಹೇಳಿದೆ. ಆದರೆ, ಎಲ್ಲ ಕಂಪನಿಗಳು ಕಾನೂನು ಮತ್ತು ಅಸ್ತಿತ್ವದಲ್ಲಿರುವ ರಾಷ್ಟ್ರೀಯ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದೆ.
ಭಾರತದಲ್ಲಿ ಸ್ಟಾರ್ಲಿಂಕ್ನ ಉಪಗ್ರಹ ಆಧಾರಿತ ಬ್ರಾಡ್ಬ್ಯಾಂಡ್ ಸೇವೆಗಳ ಆರಂಭ ವಿಳಂಬವಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಮುಖೇಶ್ ಅಂಬಾನಿ ಅವರನ್ನು ಎಲಾನ್ ಮಸ್ಕ್ ತೀವ್ರವಾಗಿ ಟೀಕಿಸಿದ ಬೆನ್ನಲ್ಲೇ ರಿಲಯನ್ಸ್ ಈ ಪ್ರತಿಕ್ರಿಯೆ ನೀಡಿದೆ.
ಭಾರತದಲ್ಲಿ ಸ್ಟಾರ್ಲಿಂಕ್ ಸೇವೆ ಆರಂಭಿಸಲು ಆಗುತ್ತಿರುವ ವಿಳಂಬದ ಕುರಿತು ಸ್ಪೇಸ್ಎಕ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಸ್ಕ್ ಅವರು ಅಂಬಾನಿ ವಿರುದ್ಧ ಪದೇಪದೇ ವಾಗ್ದಾಳಿ ನಡೆಸಿದ್ದಾರೆ. ಅಂಬಾನಿ ಅವರ ಜಿಯೋ ಕಂಪನಿಯು ಭಾರತದ ದೂರಸಂಪರ್ಕ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಹೊಂದಿದ್ದು, ಉಪಗ್ರಹ ಸಂವಹನ ಸೇವೆಗಳ ಕ್ಷೇತ್ರದಲ್ಲಿಯೂ ಸ್ಪರ್ಧೆಯಲ್ಲಿದೆ.
ರಿಲಯನ್ಸ್ ಮತ್ತು ಭಾರತೀಯ ಮಾರುಕಟ್ಟೆಯ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆಗಳ ಹಿನ್ನೆಲೆಯಲ್ಲಿ, ವಾಸ್ತವಾಂಶಗಳನ್ನು ದಾಖಲಿಸಲು ನಾವು ಬಯಸುತ್ತೇವೆ. ಪ್ರತಿಯೊಂದು ಭಾರತೀಯ ಉದ್ಯಮದಂತೆಯೇ ರಿಲಯನ್ಸ್ ಕೂಡ ಜನರ ಜೀವನವನ್ನು ಸುಧಾರಿಸುವ ದೇಶೀಯ ಅಥವಾ ಅಂತಾರಾಷ್ಟ್ರೀಯ ಹೂಡಿಕೆ ಮತ್ತು ನಾವೀನ್ಯತೆಗಳನ್ನು ಸ್ವಾಗತಿಸುವ ಭಾರತದಲ್ಲಿ ಬೆಳೆದಿದೆ. ಈ ಮುಕ್ತ ವಾತಾವರಣವು ಕಾನೂನಿನ ಆಳ್ವಿಕೆಯನ್ನು ಆಧರಿಸಿದೆ. ಭಾರತೀಯ ಅಥವಾ ವಿದೇಶಿ ಎಂಬ ಭೇದವಿಲ್ಲದೆ ಪ್ರತಿಯೊಬ್ಬ ಅರ್ಜಿದಾರರಿಗೂ ಒಂದೇ ರೀತಿಯ ಪ್ರಕ್ರಿಯೆ ಅನ್ವಯಿಸುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಜಿಯೋದ ಸ್ವಂತ ಉಪಗ್ರಹ ಸೇವೆಗಳಿಗೂ ಇನ್ನೂ ಅನುಮತಿಗಳು ದೊರೆತಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.
ರಿಲಯನ್ಸ್ನಲ್ಲಿ ನಾವು ಎಂದಿಗೂ ಸ್ಪರ್ಧೆಗೆ ಹೆದರಿಲ್ಲ. ಗ್ರಾಹಕರಿಗೆ ಯಾರು ಅತ್ಯುತ್ತಮ ಸೇವೆ ನೀಡುತ್ತಾರೆ ಎಂಬುದನ್ನು ನಿರ್ಧರಿಸುವ ನಿಜವಾದ ಪರೀಕ್ಷೆಯೇ ಸ್ಪರ್ಧೆ ಎಂದು ನಾವು ಭಾವಿಸುತ್ತೇವೆ. 2016ರಲ್ಲಿ ಜಿಯೋ ಭಾರತದ ಸ್ಪರ್ಧಾತ್ಮಕ ದೂರಸಂಪರ್ಕ ಮಾರುಕಟ್ಟೆ ಪ್ರವೇಶಿಸಿದಾಗ, ಗ್ರಾಹಕರೇ ಇರಲಿಲ್ಲ. ಕೇವಲ 10 ವರ್ಷಗಳಲ್ಲಿ 53 ಕೋಟಿಗೂ ಅಧಿಕ ಗ್ರಾಹಕರ ವಿಶ್ವಾಸ ಗಳಿಸಿರುವ ಜಿಯೋ, ಭಾರತೀಯರಿಗೆ ಅತ್ಯುತ್ತಮ ಡಿಜಿಟಲ್ ಮೂಲಸೌಕರ್ಯ ಮತ್ತು ವಿಶ್ವದ ಅತ್ಯಂತ ಕೈಗೆಟುಕುವ ದರದ ಡೇಟಾ ಸೇವೆಗಳಲ್ಲಿ ಕೆಲವನ್ನು ಒದಗಿಸಿದೆ.
ಸ್ಟಾರ್ಲಿಂಕ್ ಸೇರಿದಂತೆ ಉಪಗ್ರಹ ಸಂವಹನ ಕ್ಷೇತ್ರದ ಸ್ಪರ್ಧೆಯನ್ನು ನಾವು ಸ್ವಾಗತಿಸುತ್ತೇವೆ. ಜಿಯೋ ಸೇರಿ ಪ್ರತಿಯೊಂದು ಕಂಪನಿಯೂ ಜನರಿಗೆ ಸೇವೆ ಸಲ್ಲಿಸುವುದರ ಜೊತೆಗೆ ದೇಶದ ಕಾನೂನು ಮತ್ತು ನೀತಿಗಳನ್ನು ಪಾಲಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ಒಂದು ವಾರದಿಂದ ಎಲಾನ್ ಮಸ್ಕ್ ಅವರು ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ರಿಲಯನ್ಸ್ ಏಕಸ್ವಾಮ್ಯದ ನಡೆ ಹೊಂದಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಭಾರತೀಯ ಮಾರುಕಟ್ಟೆಗೆ ಸ್ಟಾರ್ಲಿಂಕ್ ಪ್ರವೇಶಿಸುವುದನ್ನು ಪಟ್ಟಭದ್ರ ಹಿತಾಸಕ್ತಿಗಳು ತಡೆಯುತ್ತಿವೆ ಎಂದೂ ದೂರಿದ್ದಾರೆ.
ಹೆಚ್ಚಿನ ಸ್ಪರ್ಧೆಯಿಂದ ಈಗಾಗಲೇ ಮಾರುಕಟ್ಟೆಯಲ್ಲಿರುವ ಕಂಪನಿಗಳ ಲಾಭ ಕಡಿಮೆಯಾಗಬಹುದು. ಆದರೆ, ಅದರಿಂದ ಅವುಗಳ ಉದ್ಯಮಗಳಿಗೆ ಅನಿವಾರ್ಯವಾಗಿ ಅಪಾಯ ಎದುರಾಗುತ್ತದೆ ಎಂದೇನಿಲ್ಲ ಎಂದು ಅವರು ಹೇಳಿದ್ದಾರೆ.
ವಾಸ್ತವವೆಂದರೆ, ಸ್ಪರ್ಧೆಯಿಂದ ಭಾರತೀಯ ಸಾಮಾನ್ಯ ನಾಗರಿಕರಿಗೆ ಹೆಚ್ಚಿನ ಆಯ್ಕೆಗಳು ಲಭ್ಯವಾಗಲಿದ್ದು, ಇದರಿಂದ ಅವರಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಅಂಬಾನಿ ಅವರ ಲಾಭ ಕಡಿಮೆಯಾಗಬಹುದು. ಆದರೆ, ಅವರ ಉದ್ಯಮ ಮುಚ್ಚಿಹೋಗುವುದಿಲ್ಲ ಎಂದು ಮಸ್ಕ್ ಬರೆದಿದ್ದರು.
ಇದಕ್ಕೂ ಮೊದಲು ಎಕ್ಸ್ನಲ್ಲಿ ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ಅವರನ್ನು ವ್ಯಂಗ್ಯವಾಗಿ ‘ಪ್ರಧಾನಿ ಅಂಬಾನಿ’ ಎಂದು ಸಂಬೋಧಿಸಿದ್ದ ಮಸ್ಕ್, ಏಕಸ್ವಾಮ್ಯವನ್ನು ರಕ್ಷಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ತಮ್ಮ ಉಪಗ್ರಹ ಇಂಟರ್ನೆಟ್ ಸೇವೆಗೆ ಭಾರತದಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ ಅಂಬಾನಿ ಯೋಚಿಸಬಹುದೇ ಎಂದೂ ಪ್ರಶ್ನಿಸಿದ್ದರು.