ಮುಂಬೈ: ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಕೊನೆಯ ಚಿತ್ರ 'ಬಾಂಬೆ ವೆಲ್ವೆಟ್' ಹುಟ್ಟಿಸಿದ್ದ ನಿರೀಕ್ಷೆಗಳನ್ನು ಉಳಿಸಿಕೊಳ್ಳಲು ವಿಫಲವಾಗಿರಬಹುದು ಆದರೆ ನಿರ್ದೇಶಕನ ಗೆಳೆಯ ಮತ್ತು ನಟ ನವಾಜುದ್ದೀನ್ ಸಿದ್ದಿಕಿ ಪ್ರಕಾರ 'ರಾಮನ್ ರಾಘವ್ ೨.೦' ಮೂಲಕ ಅನುರಾಗ್ ಕಶ್ಯಪ್ ಫಾರ್ಮ್ ಗೆ ಹಿಂದಿರುಗಲಿದ್ದಾರೆ ಎಂದಿದ್ದಾರೆ.
ಸೈಕೋ ರಾಘವ ಎಂದೆ ಹೆಸರಾಗಿದ್ದ ರಾಮನ್ ರಾಘವ್ ೬೦ ರ ದಶಕದ ಮುಂಬೈನ ಸರಣಿ ಕೊಲೆಗಾರ.
ಕೊಲೆಗಾರ ರಾಘವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಶಸ್ತಿ ವಿಜೇತ ನಟ ನವಾಜುದ್ದೀನ್ ಇದು ಕಶ್ಯಪ್ ಅವರ ಅತ್ಯುತ್ತಮ ಸಿನೆಮಾಗಳಲ್ಲೊಂದು ಎಂದಿದ್ದಾರೆ.
"ರಾಮನ್ ರಾಘವ್ ಮೂಲಕ ಅನುರಾಗ್ ಕಶ್ಯಪ್ ಖಂಡಿತ ಮತ್ತೆ ಮಿಂಚಲಿದ್ದಾರೆ. ಅದರ ಬಗ್ಗೆ ನನಗೆ ವಿಶ್ವಾಸವಿದೆ. ಇದು ಅವರ ಅತ್ಯುತ್ತಮ ಸಿನೆಮಾಗಳಲ್ಲಿ ಒಂದು ಎಂದು ವಿಶ್ವಾಸದಿಂದ ಹೇಳಬಲ್ಲೆ. ಇದಕ್ಕಾಗಿ ಅವರು ಬಹಳ ಬೆವರು ಸುರಿಸಿದ್ದಾರೆ" ಎಂದು ಕೂಡ ನವಾಜುದ್ದೀನ್ ಹೇಳಿದ್ದಾರೆ.
೪೧ ವರ್ಷದ ನಟ ಈ ಮೊದಲು ಕಶ್ಯಪ್ ಅವರ 'ಬ್ಲಾಕ್ ಫ್ರೈಡೆ' ಮತ್ತು 'ಗ್ಯಾಂಗ್ಸ್ ಆಫ್ ವಸೀಪುರ್' ಸಿನೆಮಾಗಳಲ್ಲೂ ಕೆಲಸ ಮಾಡಿದ್ದಾರೆ.
"ಅನುರಾಗ್ ಜೊತೆಗೆ ಕೆಲಸ ಮಾಡುವುದೆಂದರೆ ಹೊಸದನ್ನು ಮತ್ತು ಗೊತ್ತಿಲ್ಲದ್ದನ್ನು ಹುಡುಕುವ ಅನುಭವ. ಅದು 'ದೇವ್ ಡಿ' ನಲ್ಲಿ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುವುದಾಗಲೀ ಅಥವಾ ರಾಮನ್ ರಾಘವ್ ಪಾತ್ರವಾಗಲಿ ಅನಿರೀಕ್ಷಿತವಾದದ್ದನ್ನು ಅವರು ನನಗೆ ನೀಡುತ್ತಾರೆ" ಎಂದು ನಿರ್ದೇಶಕರನ್ನು ಮನಸಾರೆ ಹೊಗಳಿದ್ದಾರೆ.
ವಿಕಿ ಕೌಶಲ್ ಕೂಡ ನಟಿಸಿರುವ 'ರಾಮನ್ ರಾಘವ್ ೨.೦' ಕಾನ್ ಅಂತರಾಷ್ಟ್ರೀಯ ಸಿನೆಮೋತ್ಸವದಲ್ಲಿ ಕೂಡ ಪ್ರದರ್ಶನ ಕಾಣಲಿದೆ. ಮತ್ತು ದೇಶದಾದ್ಯಂತ ಜೂನ್ ೨೪ಕ್ಕೆ ಬಿಡುಗಡೆಯಾಗಲಿದೆ.