ಹಿಂದಿಯಲ್ಲಿ ಹೊಸ ಹೀರೋಯಿನ್‍ಗಳು ಕಮ್ಮಿ ಆಗ್ತಿದ್ದಾರೆ ಅಂತನ್ನಿಸಿದಾಗ, ಪರ ಭಾಷಾ ಚಿತ್ರರಂಗಗಳ ಮೇಲೆ ಡೈರೆಕ್ಟರ್‍ಗಳ ಕಣ್ಣು ಬೀಳುತ್ತೆ. 'ರಾಝ್ 4' ಹಿಂದಿ ಚಿತ್ರಕ್ಕೆ ಕೃತಿ ಖರಬಂದಳಿಗೆ ಡೈರೆಕ್ಟ್ ಪಾಸ್ ಸಿಕ್ಕಿದ್ದೂ ಇದೇ ಹಿನ್ನೆಲೆಯಲ್ಲೇ. ಈ ಹಿಂದೆಯೂ ಇಲಿಯಾನಾ, ತಮನ್ನಾರಂಥ ನಟಿಯರು ಹೀಗೆಯೇ ಹೋಗಿಬಂದರು. ಆದರೆ, ಇವರೆಲ್ಲ ತುಸು ಏನು ಒಳ್ಳೆಯ ಹೆಸರು ಮಾಡಿದ ನಟಿಯರೇ ಆಗಿದ್ದರು. ಆದರೆ, ಬಾಲಿವುಡ್ ಈಗ ಬೇರೆ ಭಾಷೆಯಲ್ಲಿ ಕಾಣಿಸಿಕೊಂಡ ತೀರಾ ಹೊಸ ನಟಿಯನ್ನು ಛಕ್ಕನೆ ತನ್ನತ್ತ ಸೆಳೆದುಕೊಂಡಿದೆ. ಕನ್ನಡದಲ್ಲಿ 'ಐಶ್ವರ್ಯ' ಚಿತ್ರದ ಮೂಲಕ ಸಿನಿಲೋಕಕ್ಕೆ ಕಾಲಿಟ್ಟ ದೀಪಿಕಾ ಪಡುಕೋಣೆಯನ್ನು ಬಾಲಿವುಡ್ ಹೀಗೆಯೇ ಕೂಡಲೇ ಅಪ್ಪಿಕೊಂಡಿತ್ತು. ಹಾಗಾದ್ರೆ, ಯಾರು ಆ ಅದೃಷ್ಟದ ನಟಿ? ಸಾಯೆಷಾ ಸೆಹಗಲ್! ಮುಂಬೈನ ಈ ಯುವ ನಟಿಗೆ ಬಾಲಿವುಡ್ ತೀರಾ ಹತ್ತಿರ ಇದ್ದರೂ ಈಕೆಗೆ ಮೊದಲು ಆಫರ್ ಕೊಟ್ಟಿದ್ದು ಟಾಲಿವುಡ್ ಅಕ್ಕಿನೇನಿ ಅಖಿಲ್ ನಟಿಸಿದ ಅಖಿಲ್ ಚಿತ್ರವೇ ಈಕೆಯ ಮೊದಲ ಸಿನಿ ಹೆಜ್ಜೆ. ಕ್ಯೂಟ್ ಲುಕ್ಕು, ಸಿಹಿಜೇನಿನಂಥ ವಾಯ್ಸು, ಗ್ಲ್ಯಾಮರ್ ನಟನೆಯಿಂದ ಮೊದಲ ಸಿನಿಮಾದಲ್ಲೇ ಕ್ಲಿಕ್ ಆದಳು. ಈ ಚಿತ್ರ ತೆರೆಕಂಡಿದ್ದು ಕಳೆದ ನವೆಂಬರ್ ನಲ್ಲಿ ಇನ್ನೇನು ತೆಲುಗು ಚಿತ್ರಗಳ ಆಫರ್ ಬಂದೇಬಿಟ್ಟವು ಅನ್ನೋವಾಗ ಬಾಲಿವುಡ್‍ನಿಂದ ಕರೆ ಬಂದಾಗಿತ್ತು. ಅದೂ ಅಜಯ್ ದೇವಗನ್‍ನಂಥ ಸ್ಟಾರ್ ನಟನ ಎದುರು ಮಿಂಚಲು! 'ಶಿವಾಯ್'ಗೆ ನಾಯಕಿ: 300 ಕೋಟಿ ರು. ವೆಚ್ಚದ ಅಜಯ್ ದೇವಗನ್‍ರ ಮುಂದಿನ ಬಹುನಿರೀಕ್ಷಿತ ಚಿತ್ರ `ಶಿವಾಯ್'. ಬಲ್ಗೇರಿಯಾ, ಹೈದರಾಬಾದ್, ಉತ್ತರಖಂಡದಲ್ಲಿ ಸಿನಿಮಾದ ಚಿತ್ರೀಕರಣ ಸಾಗಿದೆ. ಈ ವರುಷದ ದೀಪಾವಳಿಗೆ ತೆರೆ ಕಾಣುತ್ತಿದೆ. ಈ ಅದ್ಧೂರಿ ಬಜೆಟ್ಟಿನ ಚಿತ್ರದಲ್ಲಿ ಲೀಡ್ ರೋಲ್ ನಲ್ಲಿ ಸಾಯೆಷಾ ಕಾಣಿಸಿಕೊಳ್ತಿದ್ದಾಳೆ. 'ಏಕ್ ತಾ ಟೈಗರ್'ನಲ್ಲಿ ಕತ್ರಿನಾ ಕೈಫ್ ಆ್ಯಕ್ಷನ್ ಅವತಾರ ತಾಳಿದಂತೆ ಇಲ್ಲೂ ಸಾಯೆಷಾ ಆ್ಯಕ್ಷನ್ ಕ್ವೀನ್ ಆಗಿ ಕಾಣಿಸಿಕೊಂಡಿದ್ದಾಳಂತೆ. ರನ್ನಿಂಗ್, ಜಂಪಿಂಗ್ ಸೇರಿದಂತೆ ನಾನಾ ಸ್ಟಂಟ್‍ಗಳಲ್ಲಿ ಪಾಲ್ಗೊಂಡಾಗಲೆಲ್ಲ ಸಾಯೆಷಾ ಸುಸ್ತೋ ಸುಸ್ತು. 'ಅಜಯ್ ದೇವಗನ್ ಸರ್ ಹುರಿದುಂಬಿಸಿದಾಗಲೇ ಮತ್ತೆ ಶೂಟಿಂಗ್‍ನಲ್ಲಿ ಪಾಲ್ಗೊಂಡಿದ್ದು' ಎನ್ನುವ ಸಾಯೆಷಾಗೆ ದೇವಗನ್ ಸಿಕ್ಕಾಪಟ್ಟೆ ಇಷ್ಟ ಆಗಿದ್ದಾರೆ. ಈ ಕಾರಣಕ್ಕೆ ಸಾಯೆಷಾ ಈಗ ಹೇಳಿದ್ದು, 'ಅಜಯ್ ಆ್ಯಕ್ಟರ್ಸ್ ಡೈರೆಕ್ಟರ್'. ಯಾರಿವಳು ಸಾಯೆಷಾ?: ಮುಂಜಾನೆಯ ಮಲ್ಲಿಗೆಯಂತಿರುವ ಈ ಹುಡುಗಿಗೆ ಬಾಲಿವುಡ್ ಹೊಸ ಪ್ರಪಂಚವೇನಲ್ಲ. ಈಕೆಯ ಅಜ್ಜಿ 1960-80ರ ಕಾಲದಲ್ಲಿ ನಂ.1 ಆಗಿ ಮಿಂಚಿದ ನಟಿ. ಅಜ್ಜ ಕೂಡ ಅದೇ ಕಾಲದಲ್ಲಿ ನಟನೆಯಲ್ಲಿ ಅಲೆ ಸೃಷ್ಟಿಸಿದವರು. ಹೌದು, ಸಾಯಿರಾ ಬಾನು ಮತ್ತು ದಿಲೀಪ್ ಕುಮಾರ್ ಅವರ ಮೊಮ್ಮಗಳೇ ಸಾಯೆಷಾ ಸೇಗಲ್. ಬಾಲಿವುಡ್‍ನ ನಟ, ನಿರ್ದೇಶಕ ಸುಮೀತ್ ಸೆಹಗಲ್‍ನ ಮಗಳು ಈ ಸಾಯೆಷಾ. ದೀಪಿಕಾ ಪಡುಕೋಣೆಯಂತೆ ಈಕೆಗೂ ಅದೃಷ್ಟ ಒಲಿದು ಬರುತ್ತಾ? ಕಾದು ನೋಡಬೇಕಷ್ಟೇ.