ಚೆಕ್ ಬೌನ್ಸ್ ಪ್ರಕರಣ ಸಂಬಂಧ ಭಜರಂಗಿ ಭಾಯಿಜಾನ್ ಚಿತ್ರದ ನಟಿ ಅಲ್ಕಾ ಕೌಶಲ್ ಮತ್ತು ಅವರ ತಾಯಿಗೆ ಸಂಗರೂರ್(ಪಂಜಾಬ್) ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಕಿರುತೆರೆ ನಟಿಯಾಗಿರುವ ಅಲ್ಕಾ ಕೌಶಲ್ ಅವರು ಧಾರಾವಾಹಿ ನಿರ್ಮಾಣಕ್ಕೆಂದು ಲಾಂಗ್ರೈನ್ ಗ್ರಾಮದ ರೈತ ಅವತಾರ್ ಸಿಂಗ್ ಎಂಬುವರ ಬಳಿ 50 ಲಕ್ಷ ರುಪಾಯಿ ಸಾಲ ಪಡೆದಿದ್ದರು. ನಂತರ ಅವತಾರ್ ಸಿಂಗ್ ಸಾಲ ಕೇಳಿದಾಗ 25 ಲಕ್ಷದ ಎರಡು ಚೆಕ್ ಗಳನ್ನು ನಟಿ ಅವರಿಗೆ ನೀಡಿದ್ದರು. ಆದರೆ ಚೆಕ್ ಬೌನ್ಸ್ ಆಗಿದ್ದು ಈ ಸಂಬಂಧ ಅವತಾರ್ ಸಿಂಗ್ ಕೋರ್ಟ್ ಮೆಟ್ಟಿಲೇರಿದ್ದರು.
ಅವರಾತ್ ಸಿಂಗ್ ಹೂವಿನ ವ್ಯಾಪಾರಿಯಾಗಿದ್ದು ಶೂಟಿಂಗ್ ಸಮಯದಲ್ಲಿ ನಟಿ ಅವರೊಂದಿಗೆ ಪರಿಚಯ ಬೆಳೆದಿತ್ತು. ನಂತರ ಸಿಂಗ್ ಅವರಿಗೆ 50 ಲಕ್ಷ ರುಪಾಯಿ ಸಾಲ ನೀಡಿದ್ದರು. ಈ ಪ್ರಕರಣ ಸಂಬಂಧ ಮಲೇರ್ಕೋಟ್ಲದ ಸ್ಥಳೀಯ ನ್ಯಾಯಾಲಯ ನಟಿ ಮತ್ತು ಆಕೆಯ ತಾಯಿಗೆ ಎರಡು ವರ್ಷ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಸ್ಥಳೀಯ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಅಲ್ಕಾ ಸಂಗರೂರ್ ಕೋರ್ಟ್ ಮೆಟ್ಟಿಲೇರಿದ್ದು ಸಂಗರೂರ್ ಕೋರ್ಟ್ ಸ್ಥಳೀಯ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ಇದೀಗ ಅಲ್ಕಾ ಮತ್ತು ಅವರ ತಾಯಿ ಸಂಗರೂರ್ ಜಿಲ್ಲಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಭಜರಂಗಿ ಜಾಯಿಜಾನ್ ಚಿತ್ರದಲ್ಲಿ ಅಲ್ಕಾ ಕೌಶಲ್ ಅವರು ಕರಿನಾ ಕಪೂರ್ ಅವರ ತಾಯಿ ಪಾತ್ರದಲ್ಲಿ ನಟಿಸಿದ್ದರು.