ಬಾಲಿವುಡ್

ಸೆಲ್ಫಿಗಳಿಗಾಗಿ ನಾವು ನಮ್ಮನ್ನು ಮಾರಿಕೊಂಡಿದ್ದೇವೆ: ಶಾರುಖ್ ಖಾನ್

Sumana Upadhyaya
ನವದೆಹಲಿ: ಶಾರೂಕ್ ಖಾನ್ ನಂತಹ ಸ್ಟಾರ್ ನಟರಿಗೆ ಅವರ ಜೀವನದ ಬಹುತೇಕ ಸಮಯ ಕ್ಯಾಮರಾ, ಸೆಲ್ಫಿ ಮುಂದೆಯೇ ಕಳೆದುಹೋಗುತ್ತದೆ. ಅವರು ಎಲ್ಲಿ ಹೋದರಲ್ಲಿ ಕ್ಯಾಮರಾ, ಸೆಲ್ಫಿಗಳು ಅವರನ್ನು ಸುತ್ತುವರಿಯುತ್ತವೆ. 
ಸಿನಿಮಾ ಪತ್ರಕರ್ತ ರಾಜೀವ್ ಮಸಂದ್ ಜೊತೆ ನಡೆಸಿದ ಸಂದರ್ಶನದಲ್ಲಿ ಬಾಲಿವುಡ್ ಬಾದ್ ಶಾ ಮಾತನಾಡಿ, ನಟರು ತಮ್ಮನ್ನು ತಾವು ಸೆಲ್ಫಿಗಳಿಗೆ ಮಾರಾಟ ಮಾಡಿಕೊಳ್ಳುತ್ತಿರುವುದರಿಂದ ಮಾನಸಿಕವಾಗಿ ದುರ್ಬಲರಾಗಿದ್ದಾರೆ ಎಂದು ಹೇಳಿದರು.
ಸ್ಟಾರ್ ಗಿರಿಯ ಭಾಗವಾಗಿ ನಾವಿದನ್ನು ಒಪ್ಪಿಕೊಂಡಿದ್ದೇವೆ. ಇಂದಿನ ಕಾಲದಲ್ಲಿ ಪ್ರತಿಯೊಂದು ಕೂಡ ಆಟದಂತೆ ಆಗಿದೆ. ಅದು ಕೇವಲ ಸೆಲೆಬ್ರಿಟಿಗಳ ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ನಾವು ಸೆಲ್ಫಿಗಳಿಗೆ ನಮ್ಮನ್ನು ನಾವು ಮಾರಿಕೊಂಡುಬಿಟ್ಟಿದ್ದೇವೆ ಎಂದರು.
ದಶಕಗಳಿಂದ ಚಿತ್ರೋದ್ಯಮದಲ್ಲಿ ಇದ್ದುಕೊಂಡು ಹೆಸರು, ಖ್ಯಾತಿ ಬಂದಾಗ ಈ ಕ್ಯಾಮರಾ, ಸೆಲ್ಫಿಗಳನ್ನು ನಿಭಾಯಿಸುವ ಕಲೆ ಮತ್ತು ತಂತ್ರಗಳನ್ನು ಕರಗತ ಮಾಡಿಕೊಂಡಿದ್ದೇನೆ. ಇದರೊಟ್ಟಿಗೆ ಖಾಸಗಿ ಜೀವನ ನಿಭಾಯಿಸುವುದು ಕೂಡ ಕಲೆಯಾಗಿದೆ ಎಂದರು.
ಕ್ಯಾಮರಾಗಳನ್ನು ಹೇಗೆ ಎದುರಿಸಬೇಕು ಮತ್ತು ನಿಭಾಯಿಸಬೇಕು ಎಂಬುದರ ಬಗ್ಗೆ ತಮ್ಮ ಕುಟುಂಬದವರಿಗೆ ಸಲಹೆಗಳನ್ನು ನೀಡುತ್ತೇನೆ ಎಂದು ಶಾರೂಕ್ ಖಾನ್ ಹೇಳಿದರು.
ಫೋಟೋಗ್ರಾಫರ್ ಗಳು ಬಳಿ ಬಂದು ನಿಂತರೆ ಫೋಟೋ ತೆಗೆಯಲು ಬಿಡಿ. ನಂತರ ನಾನು ಈಗ ಹೋಗಬಹುದೇ ಎಂದು ಕೇಳಿ. ಅವರು ನಿಮ್ಮ ಮಾತುಗಳನ್ನು ಕೇಳುತ್ತಾರೆ ಎಂದು ನನ್ನ ಮಕ್ಕಳಿಗೆ ಹೇಳಿಕೊಟ್ಟಿದ್ದೇನೆ. ಕಳೆದ 25 ವರ್ಷಗಳಿಂದ ನಾನು ವೃತ್ತಿ ಜೀವನದಲ್ಲಿ ಅವರನ್ನು ಬಲ್ಲೆ ಎನ್ನುತ್ತಾರೆ ಕಿಂಗ್ ಖಾನ್.
ಸಣ್ಣವರಿರುವಾಗ ನನ್ನ ಮಕ್ಕಳು ಹೊರಗಡೆ ಹೋಗುವಾಗ ಫೋಟೋಗ್ರಾಫರ್ ಗಳು ಬಂದರೆ ಇರುಸುಮುರುಸಾಗುತ್ತಿದ್ದರು. ಪ್ರತಿ ಸಾರಿ ನಾನು ಹೊರಗೆ ಹೋಗುವಾಗ ಕುಟುಂಬದವರನ್ನು ಕರೆದುಕೊಂಡು ಹೋಗುವುದಿಲ್ಲ. ನನ್ನ ಪತ್ನಿ, ಮಕ್ಕಳು ಪ್ರತಿ ಸಾರಿ ನನ್ನ ಜೊತೆ ಹೊರಗೆ ಬರುವುದಿಲ್ಲ. ನಾನು ಒಬ್ಬನೇ ಹೋಗುತ್ತೇನೆ, ಇಲ್ಲವೇ ಅವರು ಹೋದ ನಂತರ ಹೋಗುತ್ತೇನೆ.  ನಾನೊಬ್ಬ ಸ್ಟಾರ್ ನಟ. ಹಾಗಾಗಿ ಫೋಟೋಗ್ರಾಫರ್ ಗಳು ನನ್ನನ್ನು ಕಂಡರೆ ನನ್ನ ಬಳಿ ಬರುತ್ತಾರೆ. ಆದರೆ ನನ್ನ ಕುಟುಂಬದವರಿಗೆ ಈ ಸನ್ನಿವೇಶ ಎದುರಾಗಬಾರದು. ಅವರು ಕೂಡ ಅದನ್ನು ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ ಅವರು ನನ್ನ ಜೊತೆ ಹೆಚ್ಚಾಗಿ ಹೋಗುವುದಿಲ್ಲ ಎನ್ನುತ್ತಾರೆ.
ಇನ್ನು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳುಹಿಸಿದ್ದೇಕೆ ಎಂದು ಕೂಡ ಶಾರೂಕ್ ಖಾನ್ ಹೇಳುತ್ತಾರೆ. ''ನಾನು ನನ್ನ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳುಹಿಸಿದೆ. ಇಲ್ಲಿರುವಾಗ ಅವರ ಶಾಲೆಯ ಬೇರೆ ಮಕ್ಕಳು, ಶಿಕ್ಷಕರೆಲ್ಲಾ ಅವರ ಬಗ್ಗೆ ಕುತೂಹಲದಿಂದ ನೋಡುತ್ತಿದ್ದರು. ಎಲ್ಲರ ಗಮನ ಅವರ ಮೇಲೆ ಹರಿಯುತ್ತಿದ್ದಾಗ ನನ್ನ ಮಕ್ಕಳಿಗೆ ವಿಚಿತ್ರ ಭಾವನೆ ಉಂಟಾಗುತ್ತಿತ್ತು. ಅದರಿಂದ ಹೊರಬರಲು ವಿದೇಶದಲ್ಲಿ ಶಾಲೆಗೆ ಸೇರಿಸಿದೆ ಎನ್ನುತ್ತಾರೆ.
SCROLL FOR NEXT