ಹೇಮ ಮಾಲಿನಿಯವರ ಜೀವನ ಚರಿತ್ರೆ ಪುಸ್ತಕವನ್ನು ನಿನ್ನೆ ಮುಂಬೈಯಲ್ಲಿ ಬಿಡುಗಡೆ ಮಾಡಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ. ಚಿತ್ರದಲ್ಲಿ ಹೇಮ ಮಾಲಿನಿ ಕೂಡ ಇದ್ದಾರೆ.
ಮುಂಬೈ: ಬಾಲಿವುಡ್ ನಟ ಸನ್ನಿ ಡಿಯೋಲ್ ಜೊತೆ ಉತ್ತಮ ಸಂಬಂಧ ಹೊಂದಿರುವುದಾಗಿ ಬಾಲಿವುಡ್ ನ ಕನಸಿನ ಕನ್ಯೆ ಎಂದು ಅಭಿಮಾನಿಗಳಿಂದ ಕರೆಯಲ್ಪಡುವ ಹಿರಿಯ ನಟಿ ಹಾಗೂ ಸಂಸದೆ ಹೇಮ ಮಾಲಿನಿ ಹೇಳಿದ್ದಾರೆ. ಸನ್ನಿ ಡಿಯೊಲ್ ಹೇಮ ಮಾಲಿನಿಯವರ ಪತಿ ಧರ್ಮೇಂದ್ರರ ಮೊದಲ ಪತ್ನಿ ಮಗ.
69 ವರ್ಷದ ಹೇಮ ಮಾಲಿನಿಯವರ ರಾಮ್ ಕಮಲ್ ಮುಖರ್ಜಿ ಅವರು ಬರೆದಿರುವ ಜೀವನ ಚರಿತ್ರೆ ''ಹೇಮಮಾಲಿನಿ: ಬಿಯಾಂಡ್ ದ ಡ್ರೀಮ್ ಗರ್ಲ್'' ಪುಸ್ತಕ ಬಿಡುಗಡೆ ಸಮಾರಂಭ ಕಾರ್ಯಕ್ರಮ ನಿನ್ನೆ ಮುಂಬೈಯಲ್ಲಿ ನಡೆದಿತ್ತು. ನಟಿ ದೀಪಿಕಾ ಪಡುಕೋಣೆ ಪುಸ್ತಕವನ್ನು ಬಿಡುಗಡೆ ಮಾಡಿದರು.
ಸಮಾರಂಭದಲ್ಲಿ ಮಾತನಾಡಿದ ಹೇಮ ಮಾಲಿನಿ, ಸನ್ನಿ ಡಿಯೋಲ್ ಜೊತೆಗೆ ನನ್ನ ಸಂಬಂಧದ ಬಗ್ಗೆ ಪ್ರತಿಯೊಬ್ಬರಿಗೂ ಕುತೂಹಲವಿದೆ. ನಾವಿಬ್ಬರು ಹೇಗಿರುತ್ತೇವೆ ಎಂದು ಎಲ್ಲರಿಗೂ ತಿಳಿದುಕೊಳ್ಳುವ ಕಾತರವಿದೆ. ನನ್ನ ಮತ್ತು ಸನ್ನಿ ಮಧ್ಯೆ ಸೌಹಾರ್ದಯುತ ಬಾಂಧವ್ಯವಿದೆ. ನನಗೆ ಅಗತ್ಯವಿರುವಾಗಲೆಲ್ಲ ಧರ್ಮೇಂದ್ರ ಅವರ ಜೊತೆ ಸನ್ನಿ ಡಿಯೋಲ್ ಕೂಡ ನನ್ನ ಬಳಿ ಇರುತ್ತಾನೆ ಎಂದರು.
2015ರಲ್ಲಿ ರಾಜಸ್ತಾನದ ದೌಸಾ ಬಳಿ ಹೇಮ ಮಾಲಿನಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಆಗ್ರಾದಿಂದ ಜೈಪುರಕ್ಕೆ ಮರ್ಸಿಡಿಸ್ ಕಾರಿನಲ್ಲಿ ಹೋಗುತ್ತಿದ್ದಾಗ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದು ರಸ್ತೆ ಅಪಘಾತವಾಗಿ ಅವರ ಮುಖಕ್ಕೆ ಮತ್ತು ಮೂಗಿಗೆ ಗಾಯಗಳಾಗಿದ್ದವು. ಆಗ ಅವರನ್ನು ನೋಡಲು ಮೊದಲು ಬಂದವರು ಸನ್ನಿ ಡಿಯೋಲ್ ಅಂತೆ. ಬಂದವರೇ ಗಾಯಕ್ಕೆ ಸ್ಟಿಚ್ ಹಾಕಿಸಲು ಸೂಕ್ತ ವೈದ್ಯರನ್ನು ಸೂಚಿಸಿದರಂತೆ. ನನ್ನ ಆರೋಗ್ಯದ ಬಗ್ಗೆ ಸನ್ನಿ ತೋರಿಸಿದ ಕಾಳಜಿ ನನಗೆ ಆಶ್ಚರ್ಯವನ್ನುಂಟುಮಾಡಿತು. ಈ ಒಂದು ಘಟನೆಯಿಂದ ನಮ್ಮಿಬ್ಬರ ಮಧ್ಯೆ ಎಂತಹ ಸಂಬಂಧವಿದೆ ಎಂದು ಅರ್ಥ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ ಹೇಮ ಮಾಲಿನಿ.
ಶರಫತ್, ಶೋಲೆ, ಸೀತಾ ಔರ್ ಗೀತಾ ಮೊದಲಾದ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದ ಹೇಮ ಮಾಲಿನಿ ಮತ್ತು ಧರ್ಮೇಂದ್ರ 1979ರಲ್ಲಿ ವಿವಾಹವಾದರು, ಧರ್ಮೇಂದ್ರ ಅವರು ಆಗಲೇ ಪ್ರಕಾಶ್ ಕೌರ್ ಅವರನ್ನು ವಿವಾಹವಾಗಿ ಸನ್ನಿ ಡಿಯೋಲ್, ಬಾಬ್ಬಿ ಡಿಯೋಲ್, ವಿಜಿತಾ ಮತ್ತು ಅಜಿತಾ ಎಂಬ ಮಕ್ಕಳನ್ನು ಹೊಂದಿದ್ದರು. ಹೇಮ ಮಾಲಿನಿಯೊಂದಿಗೆ ಇಶಾ ಮತ್ತು ಅಹನಾ ಡಿಯೊಲ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
2004ರಲ್ಲಿ ಬಿಜೆಪಿ ಸೇರಿದ ಹೇಮ ಮಾಲಿನಿ ಪ್ರಸ್ತುತ ಉತ್ತರ ಪ್ರದೇಶದ ಮಥುರಾ ಕ್ಷೇತ್ರದ ಸಂಸದೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics